ಬೆಂಗಳೂರು:

ಉಕ್ರೇನ್ ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿರುವ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ನ ಮೃತದೇಹವನ್ನು ಶವಾಗಾರಲ್ಲಿ ಇರಿಸಲಾಗಿದ್ದು, ಅಲ್ಲಿ ದಾಳಿ ನಡೆಯುತ್ತಿರುವುದರಿಂದ ಸ್ಥಳಾಂತರಕ್ಕೆ ಅಡ್ಡಿಯಾಗುತ್ತಿದೆ.
ಅಲ್ಲಿ ಯುದ್ಧ ನಿಂತ ತಕ್ಷಣ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುವುದು ಎಂದು ವಿದೇಶಾಂಗ ಸಚಿವ ಜೈಶಂಕರ್ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಬಂಧಪಟ್ಟ ರಾಯಭಾರ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವರು ಹೇಳಿದ್ದಾರೆ. ಮೃತದೇಹವನ್ನು ತರಲು ನಮ್ಮ ಸರ್ಕಾರ ಎಲ್ಲಾ ರೀತಿಯಿಂದಲೂ ಪ್ರಯತ್ನ ಮಾಡುತ್ತಿದೆ ಎಂದರು.
ಉಕ್ರೇನ್ನಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 25 ಲಕ್ಷ ರೂಪಾಯಿ ಪರಿಹಾರ ಚೆಕ್ ನೀಡಿದ್ದರು.
ನಾಡಿದ್ದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಬಿಜೆಪಿ ಬಹುತೇಕ ರಾಜ್ಯಗಳಲ್ಲಿ ಗೆಲ್ಲುವ ವಿಶ್ವಾಸವಿದೆ, ಕಾದು ನೋಡೋಣ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








