ಬೆಂಗಳೂರು
ಉತ್ತರ ಪ್ರದೇಶದ ಗಾಂಜಾ, ಚರಸ್ನ ಘಾಟು ಬೆಂಗಳೂರಿಗೂ ತಲುಪಿದೆ. ಚರಸ್, ಗಾಂಜಾ ಬಳಸಿ ತಯಾರಿಸುವ ಭಾಂಗ್ ಚಾಕೊಲೇಟ್ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಎಗ್ಗಿಲ್ಲದೆ ಮಾರಾಟವಾಗುತ್ತಿತ್ತು. ಉತ್ತರಪ್ರದೇಶದ ಗಾಂಜಾ ಚಾಕೊಲೇಟ್ ಪ್ಯಾಕ್ಟರಿಯಿಂದ ಬೆಂಗಳೂರಿಗೆ ಪೂರೈಕೆಯಾಗುತ್ತಿದ್ದ ಭಾಂಗ್ ಚಾಕೊಲೇಟ್ ಜಾಲವನ್ನು ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ ಅವರ ತಂಡೆ ಕೊನೆಗೂ ಪತ್ತೆ ಮಾಡಿದೆ. ಅಂತರ ರಾಜ್ಯ ಭಾಂಗ್ ಚಾಕಲೋಟ್ ಪೂರೈಕೆ ಮಾಡುತ್ತಿದ್ದ ಆರು ಪೆಡ್ಲರ್ಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಅಂಕೂರ್, ಸೂರಜ್, ಸೋಮ್ ಸೇನ್, ಆನಂದ್ ಕುಮಾರ್, ಜೀತೂ ಸಿಂಗ್ ಬಳಿಯಿಂದ 10 ಲಕ್ಷ ರೂ. ಮೌಲ್ಯದ 50 ಕೆಜಿ ಚರಸ್ ಚಾಕೊಲೇಟ್ ಜಪ್ತಿ ಮಾಡಿದ್ದಾರೆ.
ಚರಸ್, ಗಾಂಜಾ ಬಳಸಿ ತಯಾರಿಸುವ ಮಾದಕ ದ್ರವ್ಯವಾಗಿದೆ ಚರಸ್ ಚಾಕೊಲೇಟ್. ಇದು ಮಕ್ಕಳು ತಿನ್ನುವ ಸಾಮಾನ್ಯ ಚಾಕೊಲೇಟ್ ರೀತಿಯೇ ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶ, ಶಾಲಾ ಕಾಲೇಜು ಆವರಣಗಳನ್ನು ಗುರಿಯಾಗಿಸುತ್ತಿದ್ದ ಆರೋಪಿಗಳು ಒಂದು ಚಾಕೊಲೇಟ್ಗೆ ನೂರು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳು ಚಾಕೊಲೇಟ್ಗಳನ್ನು ಉತ್ತರ ಪ್ರದೇಶದಿಂದ ರೈಲಿನ ಮೂಲಕ ತಂದು ಮನೆಗಳಲ್ಲಿ ಶೇಖರಣೆ ಮಾಡಿ ಇಡುತ್ತಿದ್ದರು. ಕಾನ್ಪುರದ ಮಹಾಲಕ್ಷ್ಮಿ ಫಾರ್ಮ್ ಕಂಪನಿಯ ಮಹಾಕಾಳ್ ಎಂಬ ಹೆಸರಲ್ಲಿ ಚಾಕೊಲೇಟ್ ತಯಾರಾಗುತ್ತಿತ್ತು. ಕೆಲ ರೈಲ್ವೆ ಕೂಲಿ ಕಾರ್ಮಿಕರ ಸಹಾಯ ಪಡೆದು ಅಂತರಾಜ್ಯ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಚರಸ್ ಚಾಕೊಲೇಟ್ ದಂಧೆಯ ವ್ಯಾಪ್ತಿ ಇನ್ನಷ್ಟು ದೊಡ್ಡದಾಗಿರುವ ಸುಳಿವು ಇದ್ದು, ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಬೆಳಿಗ್ಗೆ ಮಾಲ್ನಲ್ಲಿ ಕೆಲಸ, ರಾತ್ರಿ ಬೈಕ್ ಕಳ್ಳತನ ಮಾಡಿಕೊಂಡಿದ್ದ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಶೋಕಿಯ ಹಿಂದೆ ಬಿದ್ದಿದ್ದ ಮಾಲ್ ಆಫ್ ಏಷಿಯಾದಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ, ರಾತ್ರಿಯಾದರೆ ತನ್ನ ಕೈಚಳಕ ತೋರಿಸುತ್ತಿದ್ದ. ಶೋಕಿಗಾಗಿ ರಾತ್ರಿ ವೇಳೆ ಆರ್ಎಕ್ಸ್ ಬೈಕ್ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. 25 ವರ್ಷದ ಸಾಗರ್ ಎಂಬ ವ್ಯಕ್ತಿಯನ್ನ ವಿಶ್ವನಾಥಪುರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 4 ಆರ್ಎಕ್ಸ್ ಬೈಕ್ ಮತ್ತು ಎರಡು ಆ್ಯಕ್ಟೀವಾ, ಒಟ್ಟು ಆರು ಬೈಕ್ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೋಂದು ಪ್ರತ್ಯೇಕ ಪ್ರಕರಣದಲ್ಲಿ ಐಶಾರಾಮಿ ಬೈಕ್ಗಳಾದ ಎನ್ ಫೀಲ್ಡ್ ಬುಲೆಟ್ಗಳನ್ನು ಕಳ್ಳತನ ಮಾಡುತ್ತಿದ್ದ ಮೋಹನ್, ಅರುಣ್, ದಿಲೀಪ್ ಎಂಬುವವರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 42 ಲಕ್ಷ ರೂ. ಮೌಲ್ಯದ 18ಕ್ಕೂ ಹೆಚ್ಚು ಬೈಕ್ಗಳನ್ನ ಸೀಜ್ ಮಾಡಿದ್ದಾರೆ.