ಸೋಲಿನೊಂದಿಗೆ ಟೆನಿಸ್‌ಗೆ ಗುಡ್‌ ಬೈ ಹೇಳಿದ ರಫೇಲ್ ನಡಾಲ್

ಮ್ಯಾಡ್ರಿಡ್:

   ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರಫೆಲ್‌ ನಡಾಲ್‌  ಇಂದು ಅಧಿಕೃತವಾಗಿ 20 ವರ್ಷಗಳ ಟೆನಿಸ್​ ವೃತ್ತೀಜಿವನಕ್ಕೆ ವಿದಾಯ ಹೇಳಿದರು. ಸ್ಪೇನ್ ನ ಖ್ಯಾತ ಟೆನಿಸ್ ಆಟಗಾರ, ಆವೆ ಅಂಗಣದ ರಾಜ ಎಂದೇ ಕರೆಸಿಕೊಂಡಿರುವ ರಫೇಲ್ ನಡಾಲ್ 14 ಫ್ರೆಂಚ್ ಓಪನ್ ಕಿರೀಟ ಸೇರಿದಂತೆ 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದ ಸಾಧಕನಾಗಿದ್ದಾರೆ.

   ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗ್ಗೆ ನಡೆದಿದ್ದ ಡೇವಿಸ್‌ ಕಪ್‌ ಟೂರ್ನಿಯ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಸಿಂಗಲ್ಸ್‌ ವಿಭಾಗದಲ್ಲಿ ಬೋಟಿಕ್ ವ್ಯಾನ್ ಡಿ ಜಿಡ್‌ಸ್ಚುಲ್ಪ್ ವಿರುದ್ಧ ಕಣಕ್ಕಿಳಿದ್ದ ನಡಾಲ್‌ 4-6, 4-6 ಅಂತರದಿಂದ ಸೋಲು ನಿರಾಸೆ ಅನುಭವಿಸಿದರು. ಸೋಲಿನೊಂದಿಗೆ ಅವರ ವೃತ್ತಿಪರ ಟೆನಿಸ್‌ ಅಂತ್ಯಕಂಡಿತು.

   ವಿದಾಯ ಪಂದ್ಯದ ಬಳಿಕ ಭಾವುಕರಾಗಿ ಮಾತನಾಡಿದ ನಡಾಲ್‌, ಬಿರುದುಗಳು, ಅಂಕಿ ಅಂಶಗಳು ನಮ್ಮ ಬದುಕಿನಲ್ಲಿ ಸಾಕಷ್ಟಿವೆ. ಆದರೆ ನಾನು ಕಂಡ ಕನಸನ್ನು ಸಾಕಾರಗೊಳಿಸಿರುವ ಖುಷಿ ನನ್ನಲಿದೆ. ನಾನು ಇಷ್ಟು ವರ್ಷ ದೇಶಕ್ಕಾಗಿ ಆಡಿರುವ ಖುಷಿ ಇದೆ. ಒಂದು ಪರಂಪರೆಯ ಭಾಗವಾಗಿರುವ ಖುಷಿ ನನ್ನಲಿದೆ ಎಂದು ತಿಳಿಸಿದರು.

   2005ರಲ್ಲಿ ಅಷ್ಟಾಗಿ ಟೆನಿಸ್‌ ಅನುಭವ ಇಲ್ಲದಿದ್ದ 18 ವರ್ಷದ ಸ್ಪೇನ್‌ನ ರಫೆಲ್ ನಡಾಲ್ ದಿಗ್ಗಜ ಆಟಗಾರನ್ನು ಮಣಿಸಿ ಅಂದು ಫ್ರೆಂಚ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ಸೆಣಸಲು ಸಜ್ಜಾಗಿ ನಿಂತಿದ್ದರು. ಎದುರಾಳಿ,ಅರ್ಜೆಂಟೀನಾದ ಮರಿಯಾನೊ ಪೆರ್ಟಾ. ಮೊದಲ ಸೆಟ್‌ನಲ್ಲಿ ತೀವ್ರ ಪ್ರತಿಸ್ಪರ್ಧೆ ನೀಡಿದರೂ ರಫೆಲ್ ಸೋಲಿಗೆ ಶರಣಾದರು. ಆದರೆ ನಂತರ ಎರಡು ಸೆಟ್‌ಗಳಲ್ಲಿ ಪುಟಿದೆದ್ದು ಅಮೋಘ ಜಯ ಸಾಧಿಸಿದರು. ಇನ್ನೇನು, ಒಂದು ಸೆಟ್ ಗೆದ್ದರೆ ಸುಲಭವಾಗಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದ ರಫೆಲ್‌ ಅವರನ್ನು ಮರಿಯಾನೊ ಮತ್ತೆ ಕಾಡಿದರು. ಆದರೆ ರಫೆಲ್ ಪಟ್ಟುಬಿಡಲಿಲ್ಲ. ಕಾದಾಡಿ ಗೆದ್ದ ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದರು. 

   ರಫೆಲ್‌ ಆಡಿದ ಮೊದಲ ಫ್ರೆಂಚ್ ಓಪನ್‌ ಟೂರ್ನಿ ಇದಾಗಿತ್ತು. ಪ್ರಶಸ್ತಿಯ ಹಾದಿಯಲ್ಲಿ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ರೋಜರ್ ಫೆಡರರ್ ಅವರನ್ನೇ ಮಣಿಸಿದ್ದರು. ಅಂದಿನ ಆ ಗೆಲುವಿನ ಜಾತ್ರೆ ನಂತರ ಜೈತ್ರಯಾತ್ರೆಯಾಗಿಯೇ ಸಾಗಿತು. ಆವೆಮಣ್ಣಿನ ಅಂಗಣದಲ್ಲಿ ಆಡುವ ಏಕೈಕ ಗ್ರ್ಯಾನ್‌ ಸ್ಲಾಮ್‌ ಟೂರ್ನಿಯಾದ ಫ್ರೆಂಚ್ ಓಪನ್‌ನಲ್ಲಿ ಅವರು ಹೊಂದಿರುವ ಪಾರಮ್ಯಕ್ಕೆ ಜಗವೇ ಬೆರಗಾಯಿತು. ಪ್ಯಾರಿಸ್‌ನಲ್ಲಿ ಮಾಡಿದ ಸಾಧನೆಗಳಿಂದಾಗಿ ಅವರು ಆವೆಮಣ್ಣಿನ ಅಂಗಣದ ಅರಸ ಎಂದೇ ಖ್ಯಾತಿ ಪಡೆದಿದ್ದಾರೆ. ಒಟ್ಟಾರೆ ಈ ಟೂರ್ನಿಯಲ್ಲಿ 14 ಪ್ರಶಸ್ತಿ ಗೆದ್ದ ಸಾಧನೆ ಇವರದ್ದು.

   ನಡಾಲ್‌ ಅವರು ತಮ್ಮ ಇದುವರೆಗಿನ ಟೆನಿಸ್‌ ವೃತ್ತಿ ಜೀವನದಲ್ಲಿ ಒಟ್ಟು 22 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದಾರೆ. ಇದರಲ್ಲಿ 14 ಫ್ರೆಂಚ್‌ ಓಪನ್‌, 2 ಆಸ್ಟ್ರೇಲಿಯನ್‌ ಓಪನ್‌, 3 ಯುಎಸ್‌ ಓಪನ್‌, 2 ವಿಂಬಲ್ಡನ್‌ ಒಳಗೊಂಡಿದೆ. ಅತ್ಯಧಿಕ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದ ಸಾಧಕರಲ್ಲಿ ನಡಾಲ್‌ಗೆ ಎರಡನೇ ಸ್ಥಾನ. ಅಗ್ರ ಸ್ಥಾನ ನೊವಾಕ್‌ ಜೋಕೊವಿಕ್‌ಗೆ ಸಲ್ಲುತ್ತದೆ. ಜೋಕೊ 24 ಗ್ರ್ಯಾನ್‌ ಸ್ಲಾಮ್‌ ಗೆದ್ದಿದ್ದಾರೆ. 36 ಮಾಸ್ಟರ್ಸ್ ಪ್ರಶಸ್ತಿಗಳು ಮತ್ತು ಒಲಂಪಿಕ್ ಚಿನ್ನದ ಪದಕ ಸೇರಿದಂತೆ ಒಟ್ಟು 92 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿಂಗಲ್ಸ್‌ ನಲ್ಲಿ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ ಮೂವರು ಪುರುಷ ಆಟಗಾರರಲಲಿ ಒಬ್ಬರು ಎಂಬ ಅನನ್ಯ ದಾಖಲೆಯನ್ನು ಹೊಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap