ಬಿಜೆಪಿ-ಜೆಡಿಎಸ್ ಸುಳ್ಳುಗಳನ್ನು ಜನ ನಂಬಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು:

   ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ   ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇದು ರಾಜ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಪಕ್ಷದ ಪಕ್ಷದ ಸಿದ್ಧಾಂತ ಮತ್ತು ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸುಳ್ಳುಗಳನ್ನು ಯಾರೂ ನಂಬಿಲ್ಲ. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ  ತಿಳಿಸಿದರು.

  ಉಪ ಚುನಾವಣೆ ಫಲಿತಾಂಶದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅವರು, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ, ಆಶೀರ್ವದಿಸಿದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದ ಮತದಾರರಿಗೆ ನನ್ನ ಅನಂತ ಧನ್ಯವಾದಗಳು. ಈ ಮೂರೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿ, ವಿಧಾನಸಭೆಗೆ ಪ್ರವೇಶಿಸಿರುವ ನಮ್ಮ ಅಭ್ಯರ್ಥಿಗಳಾದ ಯಾಸೀರ್‌ ಅಹ್ಮದ್‌ ಖಾನ್‌ ಪಠಾಣ್‌, ಅನ್ನಪೂರ್ಣ ತುಕಾರಾಮ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಹೇಳಿದರು. 

  ಈ ಗೆಲುವಿನ ಹಿಂದಿರುವ ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಅಪಾರ ಶ್ರಮವನ್ನು ಇದೇ ವೇಳೆ ನೆನೆಯುತ್ತೇನೆ. ಈ ಗೆಲುವು ನಮ್ಮ ಸರ್ಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ. ಇದು ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ-ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ ಎಂದು ತಿಳಿಸಿದರು.

   ನಮ್ಮ ಜನ ಬೆಂಬಲಿಸುತ್ತಲೇ ಬಂದಿದ್ದಾರೆ. ನಾನು ದಂತ ಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ ಜನರ ಜತೆ ಒಡನಾಟ ಇಟ್ಟುಕೊಂಡವನು. ನಮ್ಮ ಎಲ್ಲ ಗ್ಯಾರಂಟಿ ಯೋಜನಗಳ ಫಲಾನುಭವಿಗಳು ಖುಷಿಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಧ್ಯಮಗಳ ಮೂಲಕ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಸಾಕ್ಷಾತ್ ಪ್ರಧಾನಿಯವರೇ ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ಸುಳ್ಳು ಹೇಳಿದರು. ಮಹಾರಾಷ್ಟ್ರದಲ್ಲಿ ಸುಳ್ಳು ಜಾಹೀರಾತು ನೀಡಿದ್ದರು. ಇದಕ್ಕೆಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.

   ಇವೆಲ್ಲಕ್ಕಿಂತಲೂ ಮಿಗಿಲಾಗಿ ಈ ಉಪಚುನಾವಣಾ ಫಲಿತಾಂಶ ಬೇರೆ ಕಾರಣಕ್ಕಾಗಿ ನನಗೆ ಮಹತ್ವದ್ದಾಗಿತ್ತು. ಈ ಬಾರಿ ನಾನು ಮುಖ್ಯಮಂತ್ರಿಯಾದ ನಂತರ ನನ್ನ ಮತ್ತು ನಮ್ಮ ಸರ್ಕಾರದ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಾ ನನ್ನ ಚಾರಿತ್ರ್ಯ ಹನನ ಮಾಡುವ ಪ್ರಯತ್ನವನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಾ ಬಂದಿದ್ದಾರೆ.

   ಈ ಎರಡೂ ಪಕ್ಷಗಳು ಕೂಡಿಕೊಂಡು ರಾಜಭವನದಿಂದ ಹಿಡಿದು ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿ ಹಗರಣವನ್ನು ಸೃಷ್ಟಿಸಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಹಣಿಯುವ ಪ್ರಯತ್ನ ಮಾಡಿದ್ದರು. ರಾಜಕೀಯ ದ್ವೇಷಸಾಧನೆಗಾಗಿ ನನ್ನ ಕುಟುಂಬದ ವಿರುದ್ಧವೂ ಸುಳ್ಳು ಆರೋಪವನ್ನು ಮಾಡಿ ತನಿಖೆ ನಡೆಸುವಂತೆ ಮಾಡಿದರು. ನನ್ನನ್ನು ಕಟ್ಟಿಹಾಕುವ ದೂರಾಲೋಚನೆಯಿಂದಲೇ ಬಿಜೆಪಿ ನಾಯಕರು ನನ್ನ ಮತ್ತು ನನ್ನ ಪತ್ನಿಯ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆದರೆ ಕರ್ನಾಟಕದ ಜನತೆ ಕಳೆದ ನಾಲ್ಕು ದಶಕಗಳ ನನ್ನ ರಾಜಕಾರಣವನ್ನು ಕಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸುಳ್ಳುಗಳನ್ನು ಯಾರೂ ನಂಬಿಲ್ಲ. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ.

  ಎರಡನೆಯದಾಗಿ ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರದ ಮೂಲಕ ಧಾರ್ಮಿಕ ಉನ್ಮಾದಗಳನ್ನು ಸೃಷ್ಟಿಸಿ ಜಾತಿ-ಧರ್ಮಗಳ ನಡುವೆ ಒಡಕು ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಯತ್ನಿಸಿದೆ. ಕರ್ನಾಟಕದ ಜಾತ್ಯತೀತ ಮತ್ತು ಶಾಂತಿಪ್ರಿಯ ಜನರು ಇದನ್ನು ಒಪ್ಪಿಕೊಳ್ಳದೆ ನಮ್ಮನ್ನು ಗೆಲ್ಲಿಸಿದ್ದಾರೆ. 

   ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು 136 ಸ್ಥಾನಗಳನ್ನು ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. ಆದರೆ, ಚುನಾವಣಾ ಫಲಿತಾಂಶದ ಮರುದಿನದಿಂದಲೇ ಬಿಜೆಪಿ ಮತ್ತು ಜೆಡಿಎಸ್ ಕೂಡಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನ ಶುರು‌ ಮಾಡಿದ್ದರು. ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದು ನಮ್ಮ ಶಾಸಕರನ್ನು ಖರೀದಿಸುವ ದುಷ್ಟ ಪ್ರಯತ್ನ‌ ಮಾಡಿದ್ದರು. ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ರಾಜ್ಯದ ಜನತೆ ಸಹಿಸಿಲ್ಲ ಎನ್ನುವುದನ್ನು ಕೂಡಾ ಈ ಫಲಿತಾಂಶ ಹೇಳಿದೆ.

  ನಾವು ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದಾಗ ಒಂದಷ್ಟು ವಿರೋಧ ವ್ಯಕ್ತವಾಗಿರುವುದು ನಿಜ. ಇದರಿಂದ ಹಿಂದು ಮತ ಧ್ರುವೀಕರಣವಾಗುತ್ತದೆ ಎಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದರು. ನನ್ನ ಮೇಲೆಯೂ ಒತ್ತಡ ಇತ್ತು. ಹೀಗಿದ್ದರೂ ಮುಸ್ಲಿಂ ವ್ಯಕ್ತಿಗೆ ನಾವು ಟಿಕೆಟ್ ಕೊಟ್ಟೆವು. ಜಾತಿ-ಧರ್ಮದ ಭೇದ ಮಾಡದೆ ಸಮರ್ಥ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಕೊಂಡೆವು. ಜನ ನಮ್ಮ ಮಾತಿಗೆ ಒಪ್ಪಿಕೊಂಡು ಶಿಗ್ಗಾಂವಿಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದು ಬಿಜೆಪಿಯವರ ಕೋಮುವಾದಿ ರಾಜಕಾರಣಕ್ಕೆ ನೀಡಿದ ಉತ್ತರವಾಗಿದೆ ಎಂಧು ನಾನು ಭಾವಿಸಿದ್ದೇನೆ.

   ಕೊನೆಯದಾಗಿ ಉಪಚುನಾವಣೆಗಳಲ್ಲಿ ಸೋಲು ಬಿಜೆಪಿ ನಾಯಕರ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. ಇನ್ನಾದರೂ ಅವರು ರಾಜಕೀಯ ದ್ವೇಷದ ರಾಜಕಾರಣವನ್ನು ಕೈಬಿಟ್ಟು ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. 

  ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಆರೋಪದಿಂದ ನನಗೆ ಬಹಳ ಬೇಸರ ಆಗಿದೆ. ನಾನು ಬಹಳ ವರ್ಷ ಅವರ ಜತೆಗೆ ಇದ್ದವನು. ಆದರೂ ಕೂಡ, ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ನನ್ನ ಗುರಿ, ಸಿದ್ದರಾಮಯ್ಯ ಅಹಂಕಾರ, ಸೊಕ್ಕು ಮುರಿತೀನಿ ಅಂತೆಲ್ಲಾ ಮಾತನಾಡಿದರು. ನಾನು ಮಂತ್ರಿ ಆಗಿ 40 ವರ್ಷ ಆಯ್ತು. ಎರಡು ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದೇನೆ. ಯಾವತ್ತೂ ಸೊಕ್ಕು, ಅಹಂಕಾರ ತೋರಿಲ್ಲ. ಜನ‌ ಅವಕಾಶ ಕೊಟ್ಟಾಗ ಅಧಿಕಾರ ನಡೆಸಿದ್ದೇವೆ. ಸೋತಾಗ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.

  ಬಿಜೆಪಿಯವರು ಮತದಾರರನ್ನು ಪೆದ್ದರು ಎಂದು ಭಾವಿಸುವುದನ್ನು ನಿಲ್ಲಿಸಬೇಕು. ಪ್ರತಿ ಬಾರಿ ಮತದಾರರನ್ನು ಬಕ್ರಾ ಮಾಡಿ ಗೆಲ್ತೀವಿ ಎನ್ನುವ ಬುದ್ಧಿಯನ್ನು ಬಿಜೆಪಿಯವರು ಬಿಡಬೇಕು. ಸಾಲದ್ದಕ್ಕೆ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಎಲ್ಲರೂ ಅಳೋದನ್ನು ರೂಢಿ ಮಾಡಿಕೊಂಡಿದ್ದಾರೆ. ಆದ್ರೂ ಜನ ನಮಗೆ ಮತ ಹಾಕಿದ್ದಾರೆ. ಪಕ್ಷದ ಅಧ್ಯಕ್ಷರು, ಮಂತ್ರಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಎಲ್ಲರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ ಎಂದು ಹೇಳಿದರು. 

  ಇನ್ನು ವಯನಾಡ್‌ನಲ್ಲಿ 4 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಜಯಗಳಿಸಿರುವ ಪ್ರಿಯಾಂಕ ಗಾಂಧಿಯವರಿಗೆ ಮತ್ತು ಕೇರಳ ಜನತೆಗೆ ಅಭಿನಂದನೆಗಳು. ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಇ.ಡಿ.ಯವರು ಜೈಲಿಗೆ ಕಳುಹಿಸಿದ್ದರು. ಬಿಜೆಪಿಯವರು ಸುಳ್ಳು ಕೇಸಲ್ಲಿ ಮುಖ್ಯಮಂತ್ರಿಯವರನ್ನು ಜೈಲಿಗೆ ಕಳುಹಿಸಿದರೂ ಜನತಾ ನ್ಯಾಯಾಲಯದಲ್ಲಿ ಜನ ಅವರ ಪರವಾಗಿ ಜನಾದೇಶ ಕೊಟ್ಟಿದ್ದಾರೆ. ಜಾರ್ಖಂಡ್ ಜನರನ್ನು ಅಭಿನಂಧಿಸುತ್ತೇನೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link