ಗುವಾಹಟಿ:
ಅಸ್ಸಾಂನ ಗೋಲ್ಪಾರ ಜಿಲ್ಲೆಯಲ್ಲಿ ಗುರುವಾರ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಭಾರಿ ಹಿಂಸಾಚಾರ ನಡೆದಿದ್ದು, ಪೊಲೀಸ್, ಅರಣ್ಯ ಸಿಬ್ಬಂದಿ ಮತ್ತು ಸ್ಥಳಾಂತರಿಸಲ್ಪಟ್ಟ ವಲಸಿಗರ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಮೇಘಾಲಯ ಗಡಿ ಬಳಿಯ ಪೈಕಾನ್ ಮೀಸಲು ಅರಣ್ಯದಲ್ಲಿ ಅರಣ್ಯಾಧಿಕಾರಿಗಳು ಪೊಲೀಸರ ಸಹಾಯದೊಂದಿದೆ ಒತ್ತುವರಿ ತೆರವು ಮಾಡಲು ಮುಂದಾಗಿದ್ದ ವೇಳೆ ಗೋಲಿಬಾರ್ ನಡೆದಿದೆ.
ಅಧಿಕಾರಿಗಳ ಪ್ರಕಾರ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ಜಂಟಿ ತಂಡ ಆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದ ಕೆಲವು ವಲಸಿಗರು ಸಿಬ್ಬಂದಿಯ ಮೇಲೆ ದಾಳಿ ಮಾಡಿ, ಪ್ರತೀಕಾರ ತೀರಿಸಿಕೊಂಡರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಗುಂಡೇಟಿನಿಂದ ಗಾಯಗೊಂಡಿದ್ದರು. ಆ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ ಐದರಿಂದ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ ನಡೆದಿದೆ. ಅರಣ್ಯಾಧಿಕಾರಿಗಳು, ಪೊಲೀಸರ ಮೇಲೆ ವಲಸೆ ಮುಸ್ಲಿಮರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹಲವು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದರೆ, ಪೊಲೀಸರು ಗಾಯಗೊಂಡಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರ ನಡುವೆ ದಾಳಿ ಪ್ರತಿದಾಳಿಯಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.
ಮೀಸಲು ಅರಣ್ಯದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಈಗಾಗಲೇ 140 ಹೆಕ್ಟೇರ್ ಪ್ರದೇಶವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ಇನ್ನೂ ಇಷ್ಟೇ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ ನಡೆದಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇತ್ತೀಚೆಗೆ, ಈ ತೆರವು ಕಾರ್ಯಾಚರಣೆಯು ಒಂದು ನಿರ್ದಿಷ್ಟ ಸಮುದಾಯದ ಜನರ “ಜನಸಂಖ್ಯಾ ಆಕ್ರಮಣ”ವನ್ನು ತಡೆಯುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
