ರ‍್ಯಾಗಿಂಗ್‌ ಭೂತಕ್ಕೆ ಮತ್ತೊಂದು ಬಲಿ….!

ಕೋಲ್ಕತಾ: 

    ಪಶ್ಚಿಮ ಬಂಗಾಳದ  ಐಐಟಿ ಖರಗ್‌ಪುರದ  ಹಾಸ್ಟೆಲ್ ಕೊಠಡಿಯಲ್ಲಿ 21 ವರ್ಷದ ವಿದ್ಯಾರ್ಥಿಯೊಬ್ಬ ಶುಕ್ರವಾರ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಲ್ಲಿ ಐಐಟಿ ಖರಗ್‌ಪುರದಲ್ಲಿ ಇದು ಏಳನೇ ಆತ್ಮಹತ್ಯೆ ಪ್ರಕರಣವಾಗಿದೆ.

   ಕೋಲ್ಕತಾದ ರೀತಂ ಮೊಂಡಾಲ್ ಎಂದು ಗುರುತಿಸಲಾದ ಈ ವಿದ್ಯಾರ್ಥಿಯು, ಶುಕ್ರವಾರ ಬೆಳಗ್ಗೆ 11:30ಕ್ಕೆ ತನ್ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಘಟನೆಯ ಬಳಿಕ ಕಾಲೇಜು ಆಡಳಿತವು ಆತನ ತಂದೆ ಉತ್ತಮ್ ಮೊಂಡಾಲ್‌ಗೆ ಮಾಹಿತಿ ನೀಡಿದೆ. ರೀತಂ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದು, ರಾಜೇಂದ್ರ ಪ್ರಸಾದ್ ಹಾಲ್‌ನ ಹಾಸ್ಟೆಲ್ ಕೊಠಡಿಯಲ್ಲಿ ವಾಸಿಸುತ್ತಿದ್ದ.

   ವರದಿಯ ಪ್ರಕಾರ, ಶುಕ್ರವಾರ ಬೆಳಗ್ಗೆ 11 ಗಂಟೆಯವರೆಗೆ ರೀತಂನಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಸ್ನೇಹಿತರು ಬಾಗಿಲನ್ನು ಬಡಿದಿದ್ದಾರೆ. ಬಳಿಕ ಐಐಟಿ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಕೊಠಡಿಯ ಬಾಗಿಲನ್ನು ಒಡೆದಾಗ, ರೀತಂ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಆತನನ್ನು ಐಐಟಿ ಕ್ಯಾಂಪಸ್‌ನ ಬಿ.ಸಿ. ರಾಯ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. 

   ಐಐಟಿ ಕ್ಯಾಂಪಸ್‌ನಲ್ಲಿ ರ‍್ಯಾಗಿಂಗ್‌ಗೆ ಒಳಗಾಗಿದ್ದರಿಂದ ರೀತಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಕಾಲೇಜು ಆಡಳಿತವು ಈ ಆರೋಪಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

   2022ರಿಂದ ಐಐಟಿ ಖರಗ್‌ಪುರದಲ್ಲಿ ಏಳು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವರ್ಷವೇ ನಾಲ್ಕು ಪ್ರಕರಣಗಳು ವರದಿಯಾಗಿವೆ. ಎರಡು ತಿಂಗಳ ಹಿಂದೆ, ಕ್ಯಾಂಪಸ್‌ನಲ್ಲಿ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಐಐಟಿ 10 ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಘಟನೆಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

Recent Articles

spot_img

Related Stories

Share via
Copy link