
ಪ್ರಜಾಪ್ರಗತಿ. ಕಾಂ
ಮೈಸೂರು: ಸಚಿವ ಸಂಪುಟ ಪುನಾರಚನೆ ಮಾಡುವ ಉದ್ದೇಶವಿದೆ. ಇದೇ ತಿಂಗಳ ೧೫ನೇ ತಾರೀಖು ದೆಹಲಿಗೆ ಹೋಗುತಿಲ್ಲ. ಹೈಕಮಾಂಡ್ ಕರೆದರೆ ಮಾತ್ರ ನಾನು ದೆಹಲಿಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಗುರುವಾರ ನಗರದ ಶಾರದಾದೇವಿ ನಗರದಲ್ಲಿರುವ ತಮ್ಮ ನಿವಾಸದ ಮುಂದೆ ಜಮಾಯಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು,
ಹಿಜಾಬ್ ನಿಷೇಧ ಹಿಂದಕ್ಕೆ ಪಡೆದ ವಿಚಾರದಲ್ಲಿ ಬಿಜೆಪಿಯವರು ವಿರೋಧ ಮಾಡಿದ್ದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹಿಜಾಬ್ ಒಂದೇ ಅಲ್ಲ, ಜನಿವಾರ, ಶಿವವಾರ, ರುದ್ರಾಕ್ಷಿ ಎಲ್ಲವನ್ನು ೧೨ನೇ ತರಗತಿಯವರೆಗೆ ಮಾತ್ರ ಹಾಕಲು ಅವಕಾಶ ಇದೆ. ಆದರೆ, ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ಇಲ್ಲ. ಆದರೆ, ಕೇಸರಿ ಪೇಟ ಹಾಕಿಕೊಳ್ಳಲು ಅವಕಾಶ ಇದೆ ಎಂದು ಸ್ಪಷ್ಟ ಪಡಿಸಿದ ಅವರು ನಮ್ಮಲ್ಲಿ ಸದ್ಯಕ್ಕೆ ಆಚರಣೆಯಲ್ಲಿ ಇರುವ ಪದ್ಧತಿಗಳನ್ನು ಅನುಸರಣೆ ಮಾಡಲು ಅವಕಾಶ ಇದೆ. ಹೊಸ ಪದ್ದತಿಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಿತ ಬಳಕೆಯ ಹಿನ್ನೆಲೆಯಲ್ಲಿ ಪ್ರಧಾನಿಯವರು ತಮ್ಮ ಬೆಂಗಾವಲು ವಾಹನ ಕಡಿಮೆ ಮಾಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಇದನ್ನು ಬೆಂಬಲಿಸುವ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಬೇರೆ ರಾಜ್ಯಗಳಲ್ಲಿನ ಪ್ರಕ್ರಿಯೆಗಳನ್ನ ಪರಿಶೀಲನೆ ಮಾಡುತ್ತೇವೆ. ಆದರೆ, ಪ್ರಧಾನಿಯವರ ಮಿತ ಬಳಕೆ ಹೇಳಿಕೆ ಸರಿಯಲ್ಲ. ಇದೊಂದು ತಾತ್ಕಾಲಿಕ ಪರಿಹಾರ. ಸದ್ಯ ಈ ಪರಿಸ್ಥಿತಿಯಲ್ಲಿ ಪ್ರಧಾನಿ ಬೇರೆ ದೇಶಗಳ ಜೊತೆ ಮಾತನಾಡಬೇಕು ಎಂದಿದ್ದಾರೆ.ನೀಟ್ ಪರೀಕ್ಷೆಯನ್ನು ಸರಿಯಾಗಿ ಮಾಡಿಲ್ಲ. ಕಷ್ಟಪಟ್ಟು ಓದಿ ಬರೆದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಎಂದು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಶಾಸಕರು ಹಾಗೂ ಅಧಿಕಾರಿಗಳು ಇದ್ದರು.








