
ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರಲ್ಲಿ ದೀರ್ಘಕಾಲದಿಂದ ಚರ್ಚೆಯಲ್ಲಿರುವ ವಿಷಯ- ಬಿ ಖಾತಾದಿಂದ ಎ ಖಾತಾಕ್ಕೆ ಬದಲಾವಣೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆಸ್ತಿ ಮಾಲೀಕರು ತಮ್ಮ ಅಸ್ತಿಯನ್ನು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಹೊಸ ಯೋಜನೆ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ 23 ಲಕ್ಷ ಆಸ್ತಿಗಳಿವೆ. ಅವುಗಳಲ್ಲಿ 16 ಲಕ್ಷ ಆಸ್ತಿಗಳು ಎ ಖಾತಾ ಮತ್ತು 7 ಲಕ್ಷ ಬಿ ಖಾತೆಯಲ್ಲಿವೆ. ಬಿ ಖಾತಾ ಹೊಂದಿರುವವರು ಬ್ಯಾಂಕ್ ಸಾಲ, ಮಾರಾಟಕ್ಕೆ ಸಂಬAಧಿಸಿದAತೆ ತೊಡಕು ಎದುರಿಸುತ್ತಿದ್ದಾರೆ. ಹೀಗಾಗಿ, ಬಿ ಖಾತಾಗಳನ್ನು ಎ ಖಾತಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಸ್ತಿ ಮಾಲೀಕರು ತಮ್ಮ ಆಸ್ತಿಯ ಗೈಡೆನ್ಸ್ ವ್ಯಾಲ್ಯೂನಲ್ಲಿ 2%ಅನ್ನು ದಂಡವಾಗಿ ಪಾವತಿಸಿ ಎ ಖಾತೆಗೆ ಬದಲಾಯಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಎ ಖಾತಾ ಮತ್ತು ಬಿ ಖಾತಾ ಅಂದರೇನು? – ಎ ಖಾತಾ: ಕಟ್ಟಡ ನಿರ್ಮಾಣಕ್ಕೆ ಅಧಿಕೃತವಾಗಿ ಅನುಮೋದನೆ ಹೊಂದಿರುವ ಆಸ್ತಿ ಮತ್ತು ಎಲ್ಲ ನೀತಿ-ನಿಯಮಗಳನ್ನು ಪಾಲಿಸಿದ ಆಸ್ತಿಗಳಿಗೆ ನೀಡುವ ದಾಖಲೆ. ಇದು ಆಸ್ತಿಯ ಕಾನೂನುಬದ್ಧತೆಯನ್ನು ದೃಢೀಕರಿಸುತ್ತದೆ.
ಬಿ ಖಾತಾ: ನಿಯಮಗಳನ್ನು ಉಲ್ಲಂಘಿಸಿರುವ ಅಥವಾ ಕಂದಾಯ ಭೂಮಿಯಲ್ಲಿ ನಿರ್ಮಿಸಲಾದ ಆಸ್ತಿಗಳಿಗೆ ನೀಡುವ ತಾತ್ಕಾಲಿಕ ದಾಖಲೆ. ಬಿಬಿಎಂಪಿ ಕೇವಲ ಆಸ್ತಿ ತೆರಿಗೆ ವಸೂಲಿ ಮಾಡಲು ಈ ರಿಜಿಸ್ಟರ್ ನಿರ್ವಹಿಸುತ್ತದೆ. ಇದು ಆಸ್ತಿಗೆ ಸಂಪೂರ್ಣ ಕಾನೂನು ಮಾನ್ಯತೆ ನೀಡುವುದಿಲ್ಲ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಹೇಗೆ? : ಬಿ ಖಾತಾದಿಂದ ಎ ಖಾತೆಗೆ ಆಸ್ತಿಯನ್ನು ಬದಲಾಯಿಸಲು ರಾಜ್ಯ ಸರ್ಕಾರವು ನನ್ನ ಖಾತಾ ನನ್ನ ಹಕ್ಕು ಅಭಿಯಾನ ಆರಂಭಿಸಿದೆ. ಈ ಅಭಿಯಾನ ನಡೆಯುವ ಸ್ಥಳದಲ್ಲಿ ಮೊದಲಿಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು.
ಅರ್ಜಿ ಸಲ್ಲಿಕೆಯಾದ 6 ತಿಂಗಳೊಳಗೆ ಅಧಿಕಾರಿಗಳು ಆಸ್ತಿ ಪರಿಶೀಲನೆ ಮಾಡಿ, ಖಾತಾ ಬದಲಾವಣೆ ಸಾಧ್ಯವಾದರೆ ದಂಡವಾಗಿ ಆಸ್ತಿಯ ಗೈಡೆನ್ಸ್ ವ್ಯಾಲ್ಯೂನಲ್ಲಿ 2%ರಷ್ಟು ಹಣವನ್ನು ಕಟ್ಟಿಸಿಕೊಂಡು ಎ ಖಾತಾಗೆ ಪರಿವರ್ತನೆ ಮಾಡಿಕೊಡುತ್ತಾರೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಗರಿಷ್ಠ ಒಂದು ವರ್ಷ ಸಮಯವೂ ಆಗಬಹುದು. ಗಮನಾರ್ಹವೆಂದರೆ, ಈ ಗೈಡೆನ್ಸ್ ವ್ಯಾಲ್ಯೂ ಈ ಹಿಂದೆ 5% ಇತ್ತು. ಈಗ 2%ಗೆ ಇಳಿಸಲಾಗಿದೆ.
ಪ್ರತಿ ಶನಿವಾರ ಅಭಿಯಾನ
ಡಿ.ಕೆ ಶಿವಕುಮಾರ್ ಮಾಹಿತಿ ನೀಡಿರುವಂತೆ, ಮೇ 16ರಿಂದ ಮೂರು ತಿಂಗಳುಗಳ ಕಾಲ ಪ್ರತಿ ಶನಿವಾರ ?ನನ್ನ ಖಾತಾ ನನ್ನ ಹಕ್ಕು ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕಾಗಿ ಜಿಬಿಎ ಅಡಿಯಲ್ಲಿರುವ 5 ಪಾಲಿಕೆಗಳಿಗೆ ತಲಾ 10 ಸ್ಥಳಗಳಂತೆ ಒಟ್ಟು 50 ಜಾಗಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದ್ದರೂ ಸಹ ಅಧಿಕಾರಿಗಳು ಅಭಿಯಾನದಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.








