ಕಬಿನಿ ಜಲಾಶಯ ಭರ್ತಿ: ಪ್ರವಾಹದ ಮುನ್ನೆಚ್ಚರಿಕೆ – ಜಲಾಶಯದಿಂದ 8,000 ರಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡುವ ಸಾಧ್ಯತೆ

ಮೈಸೂರು: ಕೇರಳದ ವಯನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಹೆಚ್.ಡಿ. ಕೋಟೆ ಬಳಿ ಇರುವ ಕಬಿನಿ ಜಲಾಶಯ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ತುಂಬುವ ಹಂತಕ್ಕೆ ಬಂದಿದೆ. ನದಿ ಪಾತ್ರದ ಜನರಿಗೆ ನೀರಾವರಿ ಇಲಾಖೆ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.

ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಜಲಾಶಯವು ಪ್ರಸ್ತುತ ಭರ್ತಿಯಾಗುವ ಹಂತದಲ್ಲಿದೆ. ಆ.1ರಂದು ಪ್ರಸ್ತುತ ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, ಕಬಿನಿ ಜಲಾಶಯದಿಂದ 8,000 ರಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡುವ ಸಾಧ್ಯತೆಯಿದೆ. ಈ ಪ್ರಮಾಣವು ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗಬಹುದು ಎಂದು ನೀರಾವರಿ ಇಲಾಖೆ ತಿಳಿಸಿದೆ.

ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ಜಲಾಶಯ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಡವಾಗಿ ತುಂಬುತ್ತಿರುವ ಕಬಿನಿ: ಪೂರ್ವ ಮುಂಗಾರಿನಲ್ಲಿಯೇ ತುಂಬುವ ಹಂತಕ್ಕೆ ತಲುಪುತ್ತಿದ್ದ ಕಬಿನಿ ಜಲಾಶಯ, ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಕೇರಳದ ವಯನಾಡಿನಲ್ಲಿ ಮಳೆ ಆಗುತ್ತಿರುವುದರಿಂದ ಆಗಸ್ಟ್ 1ರಂದು ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ನದಿಪಾತ್ರದ ಜನರಿಗೆ ಅಪಾಯ ಎದುರಾದರೆ, ರೈತರಿಗೆ ನಾಲೆಗಳಲ್ಲಿ ನೀರು ಹರಿಯಲಿದೆ ಎಂದು ಸಂತಸವಾಗಿದೆ.

ಕಬಿನಿ ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು, ಜನರಿಗೆ ನೀರಾವರಿ ಇಲಾಖೆ ಪ್ರವಾಹದ ಮುನ್ನೆಚ್ಚರಿಕೆ ನೀಡಿದ್ದು, ಈ ಮೂಲಕ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವ ವಿಚಾರದಲ್ಲಿ ರಾಜ್ಯಕ್ಕೆ ಸ್ವಲ್ಪ ನಿರಾಳತೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಬೇಡ ಎಂಬ ಹೋರಾಟಗಳು ನಡೆಯುತ್ತಿರುವಾಗಲೇ ರಾಜ್ಯದಲ್ಲಿ ಅತೀ ಬೇಗ ತುಂಬುವ ಜಲಾಶಯ ಎಂಬ ಖ್ಯಾತಿ ಪಡೆದಿರುವ ಕಬಿನಿ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. ಕಳೆದ ಒಂದು ವಾರದಿಂದ ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ 84 ಅಡಿ ಎತ್ತರ ಇರುವ ಕಬಿನಿ ಜಲಾಶಯ ತುಂಬುವ ಹಂತದಲ್ಲಿದ್ದು, ಜನರಿಗೆ ನೀರಾವರಿ ನಿಗಮದಿಂದ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು ಯಾವಾಗಲಾದರೂ ಕಪಿಲ ನದಿಗೆ ಹೆಚ್ಚಿನ ನೀರನ್ನು ಬಿಡುವ ಸಾಧ್ಯತೆ ಇದ್ದು, ನದಿ ಭಾಗದ ಜನರು ಎಚ್ಚರಿಕೆಯಿಂದಿರುವAತೆ ತಿಳಿಸಲಾಗಿದೆ.

ಕಾವೇರಿ ವಿವಾದಕ್ಕೆ ಪ್ರಕೃತಿ ಪರಿಹಾರ
ತಮಿಳುನಾಡಿಗೆ ನಿತ್ಯವೂ 3,500 ಕ್ಯೂಸೆಕ್ ನೀರನ್ನು ಬಿಡಬೇಕೆಂಬ ಸಿಡಬ್ಲೂಎಂಎ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕ ನೀರು ಬಿಡಲು ಸಾಧ್ಯವಿಲ್ಲ ಎಂದು ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಆಗಸ್ಟ್ 13 ರಂದು ಕರ್ನಾಟಕ ಬಂದ್‌ಗೂ ಸಹ ಕರೆ ನೀಡಲಾಗಿದೆ. ಈ ಮಧ್ಯೆ ಕೇರಳದ ವಯನಾಡಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಇದರಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಇದರ ಜೊತೆ ಕೊಡಗಿನ ಹಾರಂಗಿ ಜಲಾಶಯವು ಭರ್ತಿಯಾಗಿದೆ. ಮತ್ತೊಂದು ಕಡೆ ಕೊಡಗಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕೆ.ಆರ್.ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಇದೇ ರೀತಿ ಮಳೆ ಬಂದರೆ ಒಂದು ವಾರದಲ್ಲಿ ಕೆ.ಆರ್.ಎಸ್ ಜಲಾಶಯಕ್ಕೆ ಹೆಚ್ಚಿನ ನೀರು ಬರುವುದರಿಂದ ಸ್ವಾಭಾವಿಕವಾಗಿ ತಮಿಳುನಾಡಿಗೆ ನೀರು ಬಿಡಲು ಯಾವುದೇ ತೊಂದರೆ ಆಗುವುದಿಲ್ಲ. ಹೀಗೆ ನೀರಿನ ಸಮಸ್ಯೆಗೆ ಪ್ರಕೃತಿ ಪರಿಹಾರ ಕೊಡುತ್ತಿದೆ.

Recent Articles

spot_img

Related Stories

Share via
Copy link