
ಬೆಂಗಳೂರು: ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಗೂಂಡಾಗಿರಿಯ ಮಾದರಿಯಲ್ಲಿ, ಬಲವಂತವಾಗಿ ರಾಜೀನಾಮೆ ಪಡೆದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರರ ವಿರುದ್ಧ ಸಂವಿಧಾನದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.
ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿಯಾದ ರಾಜ್ಯ ಬಿಜೆಪಿ ನಿಯೋಗ, ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಂವಿಧಾನಿಕ ಮೌಲ್ಯಗಳು ಸಂಪೂರ್ಣವಾಗಿ ಕುಸಿದಿದ್ದು, ಆಡಳಿತರೂಢ ಪಕ್ಷದ ನಾಯಕರು ಗೂಂಡಾಗಳAತೆ ವರ್ತಿಸುತ್ತಿದ್ದಾರೆ. ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಆಗಸ್ಟ್ 14 ರಂದು ರಾಜಿನಾಮೆ ನೀಡುತ್ತೇನೆ ಎಂದರೂ ಬಿಡದೇ ಸ್ವತಃ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಎಸ್. ರವಿ ಹಾಗೂ ಇತರರು ಸಭಾಪತಿಯವರ ಕಚೇರಿಗೆ ಹೋಗಿ 1.30 ಗಂಟೆಗೂ ಹೆಚ್ಚು ಕಾಲ ಅವರ ಮೇಲೆ ತೀವ್ರವಾದ ರಾಜಕೀಯ ಒತ್ತಡ ಹೇರಿ, ಗೂಂಡಾಗಳAತೆ ಬೆದರಿಸಿ ಅಸಂವಿಧಾನಿಕವಾಗಿ ರಾಜೀನಾಮೆ ಪಡೆದುಕೊಂಡಿದ್ದಾರೆ. ಈ ಘಟನೆಯು ಶಾಸಕಾಂಗದ ಘನತೆ ಮತ್ತು ಸಂವಿಧಾನದ ಪಾವಿತ್ರತೆಗೆ ಎಸಗಿದ ಘೋರ ಅಪಚಾರವಾಗಿದೆ ಎಂದು ದೂರು ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಹಾಗೂ ಅವರ ಆಪ್ತ ನಾಯಕರು ಒಂದು ಸಾಂವಿಧಾನಿಕ ಹುದ್ದೆಯಲ್ಲಿರುವ ಸಭಾಪತಿಗಳ ಮೇಲೆ ಗೂಂಡಾಗಳ ರೀತಿಯಲ್ಲಿ ವರ್ತಿಸಿ, ತೀವ್ರ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ, ಸಭಾಪತಿಗಳ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ, ಸಭಾಪತಿಗಳ ಅಧಿಕೃತ ‘ಲೆಟರ್ ಹೆಡ್’ ಅನ್ನು ತರುವಂತೆ ಆದೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆ ಲೆಟರ್ ಹೆಡ್ ಮೇಲೆ ಆಡಳಿತ ಪಕ್ಷದ ನಾಯಕರೇ ಖುದ್ದಾಗಿ ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿ, ಸಭಾಪತಿಗಳಿಂದ ಬಲವಂತವಾಗಿ ಹಾಗೂ ಅಸಂವಿಧಾನಿಕವಾಗಿ ಸಹಿ ಹಾಕಿಸಿಕೊಂಡಿದ್ದಾರೆ. ಶಾಸಕಾಂಗದ ಮೇಲ್ಮನೆಯ ಮುಖ್ಯಸ್ಥರ ಮೇಲೆ ಕಾರ್ಯಾಂಗದ ಮುಖ್ಯಸ್ಥರೇ ಈ ರೀತಿಯ ದಬ್ಬಾಳಿಕೆ ನಡೆಸಿರುವುದು ಭಾರತೀಯ ಸಂವಿಧಾನದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವಾಗಿದೆ. ಇದು ಸಂವಿಧಾನದ ಮೂಲ ಆಶಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ದೂರಿದ್ದಾರೆ.
ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ತಾವು ಈ ಗಂಭೀರ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಿ, ಸಂವಿಧಾನದ ಅಡಿಯಲ್ಲಿ ತಮಗಿರುವ ವಿಶೇಷ ಅಧಿಕಾರವನ್ನು ಬಳಸಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಗೂಂಡಾಗಿರಿ ಮತ್ತು ಕಾನೂನುಬಾಹಿರ ಒತ್ತಡದಿಂದ ಸೃಷ್ಟಿಸಲಾದ ಈ ಅಸಂವಿಧಾನಿಕ ರಾಜೀನಾಮೆಯನ್ನು ತಕ್ಷಣವೇ ತಿರಸ್ಕರಿಸಬೇಕು. ಸಭಾಪತಿಗಳ ಮೇಲೆ ಅಕ್ರಮ ಒತ್ತಡ ಹೇರಿ, ಶಾಸಕಾಂಗದ ಸ್ವಾಯತ್ತತೆಗೆ ಧಕ್ಕೆ ತಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್, ರವಿ ಹಾಗೂ ಇತರರ ವಿರುದ್ಧ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ವಿರೋಧಿ ಕೃತ್ಯವೆಸಗಿದ ಈ ನಾಯಕರ ವಿರುದ್ಧ ಸಂವಿಧಾನದ ಅನ್ವಯ ಕಠಿಣ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಕಾನೂನಿನ ಆಡಳಿತ ಮತ್ತು ಸಂವಿಧಾನದ ರಕ್ಷಣೆಗಾಗಿ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ಹಾಗೂ ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಎಂದು ಕೋರಿದ್ದಾರೆ.








