ಹೊಸಪೇಟೆ:

ನಗರದ ಚಿತ್ತವಾಡ್ಗಿ ಸರಕಾರಿ ಪದವೀಪೂರ್ವ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರನ್ನು ನೇಮಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ತಾಲೂಕು ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ವಿಜ್ಞಾನ, ವಾಣಿಜ್ಯಶಾಸ್ತ್ರ ಮತ್ತು ಕಲಾ ವಿಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳಾದರೂ ಉಪನ್ಯಾಸಕರ ಕೊರತೆ ನೀಗಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾ ನಿರತರ ವಿದ್ಯಾರ್ಥಿಗಳು ದೂರಿದರು.
ವರ್ಗಾವಣೆಗೊಂಡಿರುವ ವಿಜ್ಞಾನ ವಿಷಯದ ಪ್ರಾಧ್ಯಾಪಕರ ಬದಲಿಗೆ ಬೇರೊಬ್ಬರು ಬಂದಿಲ್ಲ. ಆ ತರಗತಿಗಳೇ ನಡೆಯುತ್ತಿಲ್ಲ. ಜೀವಶಾಸ್ತ್ರ, ಭೌತಶಾಸ್ತ್ರ, ಗಣಿತ ಮತ್ತು ರಸಾಯನ ಶಾಸ್ತ್ರವನ್ನು ಒಬ್ಬರೇ ಅತಿಥಿ ಉಪನ್ಯಾಸಕರು ಬೋಧಿಸುತ್ತಾರೆ. ಸೆಪ್ಟೆಂಬರ್ನಲ್ಲಿ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ. ಪಾಠ ಕೇಳದೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಕಷ್ಟವಾಗುತ್ತದೆ. ಕೂಡಲೇ ಖಾಲಿ ಇರುವ ಉಪನ್ಯಾಸಕರ ಹುದ್ದೆ ಭರ್ತಿ ಮಾಡಿದರೆ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಅವರ ಭವಿಷ್ಯ ಹಾಳಾಗಬಹುದು ಎಂದು ಆಗ್ರಹಿಸಿದರು. ನಂತರ ತಹಸೀಲ್ದಾರ್ ವಿಶ್ವನಾಥ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಸಮಿತಿ ಜಿಲ್ಲಾ ಕಾರ್ಯದರ್ಶಿ ಎರ್ರಿಸ್ವಾಮಿ ಮುಂಡರಗಿ, ರವಿ ಮ್ಯಾಸನಕೇರಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








