ಚಿತ್ರದುರ್ಗ:
ಸೃಜನಶೀಲ ಬರಹಗಾರರು ಕಥೆ ಕಾದಂಬರಿಗಳನ್ನು ಬರೆಯುವುದೆಂದರೆ ಕತ್ತಿ ಮೇಲೆ ನಡೆದಂತೆ.
ಇತಿಹಾಸ ಪಾಳೆಯಗಾರರ ಆಳ್ವಿಕೆ ಘಟನೆಗಳನ್ನು ಕುರಿತು ಬರೆಯುವಾಗ ಲೇಖಕರಿಗೆ ದೊಡ್ಡ ಸವಾಲು ಎದುರಾಗುತ್ತದೆ. ಅಂತಹ ಸವಾಲನ್ನು ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ವಿಮರ್ಶಕ ತುಮಕೂರಿನ ಜಿ.ವಿ.ಆನಂದಮೂರ್ತಿ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಚಿತ್ರದುರ್ಗ, ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಐಶ್ವರ್ಯ ಹೋಟೆಲ್‍ನಲ್ಲಿ ಭಾನುವಾರ ಸಾಹಿತಿ ಬಿ.ಎಲ್.ವೇಣುರವರ ಐತಿಹಾಸಿಕ ಕಾದಂಬರಿ ಹಗಲು ಕಗ್ಗೊಲೆ ಮಾನ್ಯ ರಾಜಾ ಮತ್ತಿ ತಿಮ್ಮಣ್ಣನಾಯಕ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಹದಿನಾರನೇ ಶತಮಾನದಲ್ಲಿ ಚಿತ್ರದುರ್ಗವನ್ನು ಸ್ವತಂತ್ರವಾಗಿ ಆಳಿದ ಪಾಳೆಯಗಾರರನ್ನು ಕೇಂದ್ರೀಕರಿಸಿಕೊಂಡು ಬಿ.ಎಲ್.ವೇಣು ರಾಜಾಮತ್ತಿ ತಿಮ್ಮಣ್ಣ ನಾಯಕ ಕಾದಂಬರಿಯನ್ನು ಬರೆದಿದ್ದಾರೆ. ಆದರ್ಶ ಸಮಾಜ ಹೇಗಿರಬೇಕೆಂಬುದನ್ನು ಬಹಳ ಸುಂದರವಾಗಿ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಚರಿತ್ರೆ ಕುರಿತು ಬರೆಯುವುದು, ಸೃಜನಶೀಲ ಬರವಣಿಗೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಚರಿತ್ರೆಯ ಕೃತಿಗಳಿಗೆ ವಿವರಗಳಿಗೆ ಎಲ್ಲಿಯೂ ಚ್ಯುತಿ ಬಾರದಂತೆ ನವೀಕರಣಗೊಳಿಸಿ ಬರವಣಿಗೆಯಲ್ಲಿ ಹೇಳುವುದು ಬರಹಗಾರನಿಗೆ ಬಹುದೊಡ್ಡ ಸವಾಲು. ಸಮಾಜದ ಎಲ್ಲಾ ವಿದ್ಯಾಮಾನ, ಪಾತ್ರ, ಘಟನೆಗಳು ಕೃತಿಯಲ್ಲಿ ಕಣ್ಣಮುಂದೆ ಬಂದು ನಿಲ್ಲವಷ್ಟು ಪ್ರಭಾವಶಾಲಿಯಾಗಿದೆ ಈ ಕಾದಂಬರಿ ಎಂದು ಅತೀವ ಸಂತಸ ವ್ಯಕ್ತಪಡಿಸಿದರು.
ರೈತರು, ದುಡಿಯುವ ಜನ, ಮಹಿಳೆಯರು, ಭೂಮಿ ಸಮಾನ ಹಂಚಿಕೆ ಹೀಗೆ ಎಲ್ಲಾ ರೀತಿಯ ತಲ್ಲಣಗಳಿಗೆ ಧ್ವನಿಯಾಗಿ ಕೃತಿ ಹೊರಹೊಮ್ಮಿದೆ. ರಾಜಸ್ವ, ಆಳ್ವಿಕೆ ಅರಮನೆಗೆ ಸೀಮಿತವಾಗಿರಬಾರದು ಎನ್ನುವುದನ್ನು ಮಾತು ಕ್ರಿಯೆಗಳ ಮೂಲಕ ಶಕ್ತಿಶಾಲಿಯಾಗಿ ರಾಜಾಮತ್ತಿ ತಿಮ್ಮಣ್ಣ ನಾಯಕ ಕಾದಂಬರಿಯಲ್ಲಿ ಕಾಣಬಹುದಾಗಿದೆ.ಬುದ್ದ, ಬಸವ, ಅಲ್ಲಮಪ್ರಭು, ಸರ್ವಜ್ಞ ಎಲ್ಲರೂ ಕಾದಂಬರಿಯಲ್ಲಿ ಬಂದು ಹೋಗಿದ್ದಾರೆ. ಇದೊಂದು ಹೊಸಕಾಲದ ಚಿಂತನೆ ಸಮಾನತೆಯ ಸಮಾಜ ಮೈಗೂಡಿಸಿಕೊಂಡಿರುವ ಅದ್ಬುತವಾದ ಕಾದಂಬರಿ.ದುಡಿಯವ ಜನತೆಯ ವಿವೇಚನೆಗಳನ್ನು ದೊಡ್ಡ ದಾಹವನ್ನಾಗಿಸಿಕೊಂಡು ಬಿ.ಎಲ್.ವೇಣು ಬರೆದಿರುವ ಈ ಕಾದಂಬರಿ ಎಲ್ಲರೂ ತಪ್ಪದೆ ಓದಲೇಬೇಕು ಎಂದು ವಿನಂತಿಸಿದರು.
ತ.ರಾ.ಸು.ರವರದು ರಾಜಮಾರ್ಗವಾಗಿತ್ತು. ಬಿ.ಎಲ್.ವೇಣುರವರದು ದೇಶಿ ಸಂಸ್ಕøತಿಯಾಗಿದೆ.ಜನಪದರು ಕರುಳಿನ ಭಾಷೆ, ರಾಜರು ಕೊರಳಿನ ಭಾಷೆ. ಗಾಧೆ ಭಾಷೆಯೊಡನೆ ಅವಿನಾಭಾವ ಸಂಬಂಧವನ್ನಿಟ್ಟುಕೊಂಡಿದೆ. ಗಾಧೆಯನ್ನು ಬಿಟ್ಟು ಭಾಷೆ ಬೇರೆಯಲ್ಲ. ಹಾಗಾಗಿ ಈ ಕಾದಂಬರಿಯಲ್ಲಿ ಬಿ.ಎಲ್.ವೇಣು ಭಾಷೆಯನ್ನು ಅತ್ಯಂತ ಶಕ್ತಿಶಾಲಿಯನ್ನಾಗಿ ಬಳಸಿಕೊಂಡಿದ್ದಾರೆ ಎಂದು ಗುಣಗಾನ ಮಾಡಿದರು.
ಹಿಂಸೆ, ಕೌರ್ಯ, ದಬ್ಬಾಳಿಕೆ ಇಲ್ಲದ ಸಮಾಜವಿರಬೇಕು ಎನ್ನುವುದು ಈ ಕಾದಂಬರಿಯ ಮೂಲ ಉದ್ದೇಶವಾಗಿದೆ. ರಾಜಾಮತ್ತಿ ತಿಮ್ಮಣ್ಣನಾಯಕನು ಹಿಂಸೆಯ ವಿರೋಧಿಯಾಗಿದ್ದ ಎನ್ನುವುದು ಈ ಕಾದಂಬರಿಯಿಂದ ತಿಳಿಯುತ್ತದೆ. ಪಾಳೆಯಗಾರರೆಂದರೆ ಬರೀ ಧೈರ್ಯ ಸಾಹಸಕ್ಕಷ್ಟೆ ಹೆಸರುವಾಸಿಯಾಗಿರಬಾರದು. ಕತ್ತಿ ಹಿಡಿದರು ದಯೇ ಕರುಣೆ ಇರಬೇಕು ಎನ್ನುವುದನ್ನು ಭಾವನೆಯ ಮೂಲಕ ಬರವಣಿಗೆಯಲ್ಲಿ ಬಿ.ಎಲ್.ವೇಣು ವ್ಯಕ್ತಪಡಿಸಿದ್ದಾರೆ.
ಇತಿಹಾಸ ಸಂಶೋಧಕ ಲಕ್ಷ್ಮಣ್‍ತೆಲಗಾವಿ ಕಾದಂಬರಿಯನ್ನು ಕುರಿತು ಮಾತನಾಡಿ ರಾಜಾಮತ್ತಿ ತಿಮ್ಮಣ್ಣ ನಾಯಕನಿಗೆ ಚಿತ್ರದುರ್ಗದ ಭೂಪರಿಸರ ಸ್ವಾಭಿಮಾನ, ಛಲವನ್ನು ಕೆರಳಿಸಿತು ಎಂಬುದು ಕಾದಂಬರಿಯಲ್ಲಿ ಸ್ಪಷ್ಟವಾಗುತ್ತದೆ. ಚಿತ್ರದುರ್ಗದಲ್ಲಿ ಕೆರೆ ಕಟ್ಟೆ, ಹೊಂಡಗಳನ್ನು ತುಂಬಿಸಿ ಸಕಲ ಜೀವರಾಶಿಗಳಿಗೂ ನೀರಿನ ದಾಹ ತೀರಿಸುವ ಹಂಬಲ ರಾಜಾಮತ್ತಿ ತಿಮ್ಮಣ್ಣ ನಾಯಕರಿಗೆ ಇತ್ತು. ಛಲ ಸಾಧಿಸಿದ ಮತ್ತಿತಿಮ್ಮಣ್ಣನಾಯಕ ವ್ಯಕ್ತಿತ್ವವನ್ನು ಬಿ.ಎಲ್.ವೇಣು ಸರಿಯಾಗಿ ತಿಳಿದುಕೊಂಡು ಕಾದಂಬರಿ ಬರೆದಿದ್ದಾರೆ ಎಂದು ಹೇಳಿದರು.
ರಸಸಿದ್ದರನ್ನು ಕಾದಂಬರಿಯಲ್ಲಿ ಪರಿಚಯಿಸಲಾಗಿದೆ. ರೋಚಕ ವಿಚಾರಗಳು ಇದರಲ್ಲಿದೆ. ರಾಜಾಮತ್ತಿ ತಿಮ್ಮಣ್ಣನಾಯಕ ಅಂತ್ಯ ಹೇಗಾಗುತ್ತದೆ ಎಂಬ ರೋಚಕ ಸನ್ನಿವೇಶದ ಜೊತೆಗೆ ಕಿಚ್ಚು, ಆವೇಶ, ಆಕ್ರೋಶ ಎಲ್ಲವೂ ಕೃತಿಯಲ್ಲಿ ಅಡಗಿದೆ ಎಂದರು.
ಸಾಹಿತಿ ಶಿವಮೊಗ್ಗದ ಶ್ರೀಕಂಠ ಕೂಡಿಗೆ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಗೀತಾಂಜಲಿ ಪುಸ್ತಕ ಪ್ರಕಾಶನದ ಮೋಹನ್‍ಕುಮಾರ್, ಕಾದಂಬರಿಕಾರ ಬಿ.ಎಲ್.ವೇಣು ವೇದಿಕೆಯಲ್ಲಿದ್ದರು.ಪ್ರಾಧ್ಯಾಪಕ ಮಹಂತೇಶ್ ನಿರೂಪಿಸಿದರು.
ಸಾಹಿತಿ ಚಿಂತಕ ಕುಂ.ವೀರಭದ್ರಪ್ಪ, ಲೋಕೇಶ್‍ಅಗಸನಕಟ್ಟೆ, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಪ್ರೊ.ಲಿಂಗಪ್ಪ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ನಿವೃತ್ತ ಪ್ರಾಚಾರ್ಯರಾದ ಸಂಗೇನಹಳ್ಳಿ ಅಶೋಕ್‍ಕುಮಾರ್, ಕೋಟೆವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ಭದ್ರಣ್ಣ, ಅಹೋಬಲನಾಯಕ, ನಿರಂಜನದೇವರಮನೆ, ಲಲಿತಾಕೃಷ್ಣಮೂರ್ತಿ ಸೇರಿದಂತೆ ಬಿ.ಎಲ್.ವೇಣುರವರ ನೂರಾರು ಅಭಿಮಾನಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








