ನಾಡಿನ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿಯೇ ಕಾನೂನು : ಸಂಸ್ಕಾರವಂತ ವ್ಯಕ್ತಿಗಳಿಂದ ಮಾತ್ರ ಕಾನೂನು ರಕ್ಷಣೆ

ಚಳ್ಳಕೆರೆ 

           ಸಮಾಜದಲ್ಲಿ ಸಮಸ್ತ ಜನರಿಗೆ ದೊರೆಯುವ ಎಲ್ಲಾ ಸೌಲಭ್ಯಗಳು ನಾಗರೀಕರು ನೀಡುವ ತೆರಿಗೆ ಹಣದಿಂದ ದೊರೆಯುತ್ತವೆ. ಸರ್ಕಾರ ನೀಡುವ ಈ ಸವಲತ್ತುಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕಾದಲ್ಲಿ ಅದು ನಮ್ಮ ಸಂವಿಧಾನ ರೂಪಿಸಿದ ಕಾನೂನಿನಿಂದ ಮಾತ್ರ ಸಾಧ್ಯವಾಗಿದೆ. ಹಾಗಾಗಿ ಸರ್ಕಾರ ಮತ್ತು ಜನರ ಸೌಲಭ್ಯಗಳ ನಡುವೆ ಕಾನೂನಿನ ಸಹಕಾರ ಅಡಕವಾಗಿದ್ದು, ಯಾವ ವ್ಯಕ್ತಿ ಕಾನೂನನ್ನು ಗೌರವಿಸುತ್ತಾನೋ ಅವನು ಮಾತ್ರ ಜೀವನವನ್ನು ನಡೆಸಲು ಸಮರ್ಥನಾಗುತ್ತಾನೆ. ಇಲ್ಲಿ ಯಾವ ವ್ಯಕ್ತಿ ಸಂಸ್ಕಾರವನ್ನು ಹೊಂದಿರುತ್ತಾನೋ ಅವನೇ ಕಾನೂನಿನ ರಕ್ಷಕ. ಪ್ರತಿಯೊಬ್ಬರ ನೆಮ್ಮದಿಯ ಬದುಕು ಕಾನೂನಿನ ಸಹಕಾರದಿಂದಲೇ ಸಕಾರವಾಗುತ್ತದೆ ಎಂಬುವುದನ್ನು ಎಲ್ಲರೂ ಮನಗಾಣಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಜಾನ್ ಮೈಕಲ್ ಕುನ್ಹಾ ತಿಳಿಸಿದರು.
           ಅವರು, ಶನಿವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಅಂದಾಜು 1.05 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಕೀಲರ ಭವನದ ಶಂಕುಸ್ಥಾಪನಾ ಹಾಗೂ ನ್ಯಾಯಾಲಯದ ಆವರಣದಲ್ಲಿ ಅಂದಾಜು 13 ಲಕ್ಷ ಶುದ್ದ ಕುಡಿಯುವ ನೀರು ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಚುನಾಯಿಯ ಜನಪ್ರತಿನಿಧಿಯಾಗಲಿ, ಸರ್ಕಾರಿ ಅಧಿಕಾರಿಗಳಾಗಲಿ ನಿಮಗೆ ಸೌಲಭ್ಯವನ್ನು ನೀಡುವಾಗ ಸರ್ಕಾರದ ಖಜಾನೆಯಲ್ಲಿರುವ ಜನರ ತೆರಿಗೆಯನ್ನೇ ನೀಡಬೇಕಿದೆ. ತೆರಿಗೆಯ ಸಂಗ್ರಹದಿಂದ ಮಾತ್ರ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಇಂತಹ ಸೌಲಭ್ಯಗಳು ಸಮಸ್ತ ಜನರಿಗೆ ಸಕಾಲದಲ್ಲಿ ತಲುವಂತೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಸೌಲಭ್ಯಗಳ ವಿತರಣೆಯಲ್ಲಿ ವಿಳಂಬ ಮತ್ತು ಲೋಪವಾದಲ್ಲಿ ಕಾನೂನಿನ ನೆರವು ಪಡೆಯಬಹುದಾಗಿದೆ.
              ಕಾನೂನು ಒಂದು ರೀತಿ ಆಡಳಿತ ಪಕ್ಷದ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ರೀತಿಯ ಆಡಳಿತಾತ್ಮಕ ಸಮಸ್ಯೆಗಳು ಉಂಟಾದಲ್ಲಿ ಕಾನೂನು ಮದ್ಯ ಪ್ರವೇಶಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ದವಾದ ಕಾನೂನು ಎಲ್ಲಾ ಜನರಿಗೂ ಸಮಾನವಾಗಿ ಕಾರ್ಯನಿರ್ವಹಿಸುತ್ತದೆ. ಕಾನೂನು ಇರುವುದೇ ಎಲ್ಲರ ಸದುಪಯೋಗಕ್ಕಾಗಿ ಯಾವುದೇ ವ್ಯಕ್ತಿ ಕಾನೂನಿನ ಮುಖವಾಡಹೊತ್ತು ಅದರ ವಿರುದ್ದವಾಗಿ ನಡೆದಲ್ಲಿ ಅವನು ಶಿಕ್ಷೆಗೆ ಆರ್ಹನಾಗುತ್ತಾನೆ. ಯಾವುದೇ ಹಂತದಲ್ಲೂ ಕಾನೂನನ್ನು ಮರೆಮಾಚಲು ಸಾಧ್ಯವಿಲ್ಲ. ಸುಳ್ಳು ಪೊಳ್ಳು ಭರವಸೆಗಳು ಅನಗತ್ಯ ವಿವಾದಗಳು ಕಾನೂನಿಗೆ ತೊಡಕಾದಲ್ಲಿ ಅವುಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಅಂಕುಶ ಕಾನೂನಿನಲ್ಲಿದೆ ಎಂದರು.

         ಹಾಗಾಗಿ ಸಮಾಜದ ಯಾವುದೇ ವ್ಯಕ್ತಿಯಾಗಲಿ ಅವನು ಕಾನೂನನ್ನು ಪರಿಪಾಲಿಸುವ ಜ್ಞಾನವನ್ನು ಹೊಂದಬೇಕಾಗುತ್ತದೆ. ಕಾನೂನು ಎಂದಿಗೂ ಯಾರನ್ನೂ ಸಹ ತಪ್ಪು ದಾರಿಗೆ ಎಳೆಯುವಂತೆ ಪ್ರೇರೇಪಣೆ ನೀಡುವುದಿಲ್ಲ. ಬದಲಾಗಿ ಸಮಾಜದ ಹಿತಕ್ಕಾಗಿ, ಸಮಾಜದ ಅಭಿವೃದ್ಧಿಗಾಗಿ ಕಾನೂನಿನ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಕಾನೂನನ್ನು ಗೌರವಿಸಿದರೆ ಸಾಕು ಅವರು ಜೀವನದ ಎಲ್ಲಾ ಆಶಯಗಳನ್ನು ಪೂರ್ಣಗೊಳಿಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತಾರೆಂದು.
           ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಶಸನ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಮಾತನಾಡಿ, ಕಾನೂನು ತನ್ನದೇಯಾದ ವೈವಿದ್ಯತೆಯನ್ನು ಹಾಗೂ ವಿಶೇಷವಾದ ಗೌರವವನ್ನು ಹೊಂದಿದೆ. ಕೇವಲ ಹಣ ಬಲವಿದ್ದಲ್ಲಿ ಕಾನೂನನ್ನು ಎದುರಿಸಲು ಸಾಧ್ಯವಿಲ್ಲ. ಇಂದು ಕಾನೂನು ಸರ್ವಶಕ್ತಿಯಾಗಿ ಬೆಳೆದಿದೆ. ಯಾವುದೇ ವ್ಯಕ್ತಿ ಲೋಪವೆಸಗಿದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ತಮಿಳು ನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ರಾಜ್ಯ ಹೈಕೋರ್ಟ್‍ನಲ್ಲಿ ಆಕ್ರಮ ಸಂಪತ್ತು ಪ್ರಕರಣದಲ್ಲಿ ಅಪರಾಧಿಯಾದಾಗ ಗೌರವಾನ್ವಿತ ನ್ಯಾಯಾಧೀಶರಾದ ಜಾನ್ ಮೈಕಲ್ ಕುನ್ಹಾ ಶಿಕ್ಷೆ ನೀಡಿದ್ದರು. ಇಡೀ ವಿಶ್ವವೇ ಇದನ್ನು ಗಮನಿಸಿತ್ತು. ಸದರಿ ತೀರ್ಪು ಇಡೀ ನ್ಯಾಯಾಂಗ ಇಲಾಖೆಗೆ ವಿಶೇಷ ಗೌರವವನ್ನು ತಂದುಕೊಟ್ಟಿತ್ತಲ್ಲದೆ ಜನರೂ ಸಹ ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸ ಮತ್ತಷ್ಟು ಗಟ್ಟಿಯಾಯಿತ್ತು ಎಂದರು.
           ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ತಾಲ್ಲೂಕು ವಕೀಲರ ಸಂಘ ನ್ಯಾಯಾಂಗ ಇಲಾಖೆ ಸಹಯೋಗದೊಂದಿಗೆ ತನ್ನದೇಯಾದ ಸಂತ ಕಟ್ಟವನ್ನು ಪಡೆಯುವ ನಿಟ್ಟಿನಲ್ಲಿ ಮಾನ್ಯ ನ್ಯಾಯಾಧೀಶರಿಂದ ಶಂಕುಸ್ಥಾಪನೆಯನ್ನು ನೆರವೇರಿಸಿದ್ಧಾರೆ. ಈಗಾಗಲೇ ನಮಗೆಲ್ಲಾ ತಿಳಿದಂತೆ ಕಾನೂನು ನಮ್ಮಲ್ಲಿ ಅಡಗಿರುವ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕು ನೀಡುವ ಸಾಧನವಾಗಿದೆ. ಇಲ್ಲಿನ ವಕೀಲರ ಸಮೂಹಕ್ಕೆ ಅವಶ್ಯವಾಗಿ ಬೇಕಾಗಿದ್ದ ‘ಮನುಪಾತ್ರ’ ಸಾಫ್ಟ್‍ವೇರ್‍ನ್ನು ಅಳವಡಿಸಲಾಗುವುದು ಎಂದರು.
           ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್, ಕೋಟೆಪ್ಪ ಕಾಂಭ್ಳೆ, ನ್ಯಾಯವಾದಿಗಳಾದ ದೊಡ್ಡರಂಗಪ್ಪ, ಟಿ.ತಮ್ಮಣ್ಣ, ತಹಶೀಲ್ದಾರ್ ಕಾಂತರಾಜು, ಡಿವೈಎಸ್ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಕಾರ್ಯಪಾಲಕ ಅಭಿಯಂತರ ಎನ್.ಸತೀಶ್‍ಬಾಬು ಮುಂತಾದವರು ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅಶ್ವತ್ಥನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಎನ್.ತಿಪ್ಪೇಸ್ವಾಮಿ ವಂದಿಸಿದರು, ಉಪಾಧ್ಯಕ್ಷ ಜಡೇಕುಂಟೆ ಕುಮಾರ್ ನಿರೂಪಿಸಿದರು.
          ಚಳ್ಳಕೆರೆ ನಗರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಜಾನ್ ಮೈಕಲ್ ಕುನ್ಹಾ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link