ಹಾನಗಲ್ಲ :
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮುಂದಾಗದಿದ್ದರೆ ರಾಜ್ಯ ಒಡೆಯುತ್ತದೆ ಎಂಬ ಎಚ್ಚರಿಕೆ ನೀಡುವ ಮೂಲಕ ರಾಜ್ಯದ ಮುಖ್ಯ ಮಂತ್ರಿಗಳ ಗಮನ ಸೆಳೆದಿದ್ದರಿಂದ ಈಗ 9 ಇಲಾಖೆಗಳನ್ನು ಉತ್ತರ ಕರ್ನಾಟಕ್ಕೆ ನೀಡಿರುವುದು ಸ್ವಾಗತಾರ್ಹವಾದರೂ, ಬೆಳಗಾವಿಯ ಸುವರ್ಣ ಸೌಧಕ್ಕೆ ಶಕ್ತಿ ತುಂಬಬೇಕಾಗಿದೆ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸೋಮಶೇಖರ ಕೋತಂಬರಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಲ್ಲಿ ಆಡಳಿತ ಮಾಡಿದ ಸರಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಗೊಳಿಸಿರುವುದರ ಪರಿಣಾಮವಾಗಿಯೇ ಪ್ರತ್ಯೇಕ ಉತ್ತರ ಕರ್ನಾಟಕದ ಬೇಡಿಕೆ ಬಲಗೊಂಡಿದೆ. ಹೋರಾಟದ ಮೂಲಕ ಇಡೀ ಉತ್ತರ ಕರ್ನಾಟಕ ಪ್ರತ್ಯೇಕಗೊಳ್ಳುವ ವಿಶ್ವಾಸವನ್ನು ಹೊಂದಿದೆ. ಈ ನಡುವೆ ಮುಖ್ಯಮಂತ್ರಿಗಳು 9 ಇಲಾಖೆಗಳನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸುವ ಆದೇಶವನ್ನು ಸಚಿವ ಸಂಪುಟದ ನಿರ್ಣಯದ ಮೂಲಕ ಹೊರಡಿಸಿರುವುದು ಸ್ವಾಗತಾರ್ಹವಾದರೂ ನಮ್ಮ ಎಲ್ಲ ಬೇಡಿಕೆಗಳು ಈಡೇರಿಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಉದ್ದೇಶ ಎಂದರು.
ನೀರಾವರಿ, ಕೃಷಿಗೆ ಆದ್ಯತೆ, ಶೈಕ್ಷಣಿಕ ಸೌಲಭ್ಯಗಳೂ, ಔದ್ಯೋಗಿಕ ಸೌಲಭ್ಯಗಳು, ಮಾಹಿತಿ ತಂತ್ರಜ್ಞಾನದ ಕೈಗಾರಿಕೋದ್ಯಮಗಳು, ವೈದ್ಯಕೀಯ ಉನ್ನತ ಶಿಕ್ಷಣ ಸಂಸ್ಥೆ, ರಸ್ತೆ ಅಭಿವೃದ್ಧಿ ಅಗಬೇಕಾಗಿದೆ. ಲೋಕೊಪಯೋಗಿ ಇಲಾಖೆ ಅಡಿಯಲ್ಲಿ ಕೆಸಿಎಫ್ ಕಛೇರಿಯನ್ನು ಉತ್ತರ ಕರ್ನಾಟಕದಲ್ಲಿಯೇ ಉಳಿಸಲು ವರ್ಗಾವಣೆ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾದರೆ ಪ್ರತ್ಯೇಕ ಉತ್ತರ ಕರ್ನಾಟಕವೇ ನಮ್ಮ ಹೋರಾಟದ ಮೊದಲ ಆದ್ಯತೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಗದೀಶ ಕೊಂಡೋಜಿ, ಮಹಾಂತೇಶ ತೊಗರಳ್ಳಿ, ಉಮೇಶ ದಾನಪ್ಪನವರ, ರವಿ ಚಿಕ್ಕೇರಿ, ಶಿವಲಿಂಗಪ್ಪ ಬೈಲಣ್ಣನವರ, ಮಧು ಪಾಣೀಗಟ್ಟಿ ಇದ್ದರು.







