ಬಳ್ಳಾರಿಯಲ್ಲಿ ಸಂಭ್ರಮದ ಹೈಕ ವಿಮೋಚನಾ ದಿನ ಆಚರಣೆ

ಬಳ್ಳಾರಿ:

          ಹೈದರಾಬಾದ್ ಕರ್ನಾಟಕ ಪ್ರದೇಶದ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಸಂವಿಧಾನದ 371(ಜೆ) ಅನ್ವಯ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದ್ದು,ಅದರನ್ವಯ ಎಚ್‍ಕೆಆರ್‍ಡಿಬಿ ವತಿಯಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.

          ಹೈಕ ವಿಮೋಚನಾ ದಿನಾಚರಣೆ ನಿಮಿತ್ತ ಜಿಲ್ಲಾಡಳಿತದ ವತಿಯಿಂದ ನಗರದ ಮುನ್ಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

           ಹೈಕ ಅಭಿವೃದ್ಧಿಗಾಗಿಯೇ ರಾಜ್ಯ ಸರಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳನ್ನು ನೀಡುತ್ತಿದ್ದು,ಅದರಡಿ ನಾನಾ ಅಭಿವೃದ್ಧಿಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಅಭಿವೃದ್ಧಿಯ ನೈಜಚಿತ್ರಣಗಳು ಹೈಕ ಪ್ರದೇಶಾದ್ಯಂತ ಕಾಣಲಾರಂಭಿಸಿವೆ ಎಂದು ವಿವರಿಸಿದ ಅವರು, 371(ಜೆ) ಜಾರಿಯಿಂದ ಉದ್ಯೋಗ,ಶಿಕ್ಷಣದದಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಎಂದರು.

            ಹೈಕ ಹೋರಾಟಗಾರರನ್ನು ಸ್ಮರಿಸಿದ ಡಿಸಿ: ಭಾರತಕ್ಕೆ ಹೈದರಾಬಾದ್ ಕರ್ನಾಟಕ ಪ್ರದೇಶ ಸೇರುವ ನಿಟ್ಟಿನಲ್ಲಿ ಹೋರಾಟಗಾರರು ನಡೆಸಿದ ಹೋರಾಟ ಮತ್ತು ತ್ಯಾಗ ಅತ್ಯಂತ ಅವಿಸ್ಮರಣಿಯ ಎಂದು ಸ್ಮರಿಸಿದ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಂತ ದಿಟ್ಟನಾಯಕತ್ವದಿಂದ ಅನೇಕ ಪ್ರಾಂತ್ಯಗಳು ಭಾರತ ದೇಶಕ್ಕೆ ಸೇರ್ಪಡೆಯಾದವು ಎಂದರು.
ಹೈಕ ಪ್ರದೇಶದ ಇತಿಹಾಸ ಮತ್ತು ವಿಮೋಚನೆ ಕುರಿತು ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಹೈಕ ವಿಮೋಚನಾ ದಿನ ಆಚರಣೆಗೆ ಸೂಚಿಸಲಾಗಿದೆ ಎಂದರು.

            ಕೆಎಂಇಆರ್‍ಸಿ ಅಡಿ 15274 ಕೋಟಿ ಮಂಜೂರು: ಕೆಎಂಇಆರ್‍ಸಿ ಅಡಿ ಈಗಾಗಲೇ ಜಿಲ್ಲಾಡಳಿತ ಸಲ್ಲಿಸಿದ ಕ್ರಿಯಾಯೋಜನೆಯಲ್ಲಿ 15274 ಕೋಟಿ ರೂ.ಗಳನ್ನು ಬಳ್ಳಾರಿ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರು ಮಂಜೂರು ಮಾಡಿಸಿದ್ದಾರೆ ಎಂದು ಡಿಸಿ ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.

           ಆರೋಗ್ಯ,ಶಿಕ್ಷಣ, ಪರಿಸರ,ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಈ ಹಣ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.6 ಮೊಬೈಲ್ ಆ್ಯಂಬುಲೆನ್ಸ್‍ಗಳನ್ನು ಆ.15ರಿಂದ ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು, ಜನರಿಗೆ ಆರೋಗ್ಯ ಸೇವೆ ದೊರಕದ ಕಡೆ ಸಂಚರಿಸಿ ಆರೋಗ್ಯ ಸಂಬಂಧಿತ ಸೇವೆಗಳನ್ನು ಒದಗಿಸುತ್ತಿದೆ ಎಂದರು.

            ಜಿಲ್ಲಾಡಳಿತದ ವತಿಯಿಂದ ಮಹಿಳಾ ಮತ್ತು ವಿದ್ಯಾರ್ಥಿ ಸಬಲೀಕರಣಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 10 ಸಾವಿರ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ, ಗುಣಮಟ್ಟದ ಶಿಕ್ಷಣ ಒದಗಿಸುವ ಮತ್ತು ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಕೌಶಲ್ಯಯುತ ಅಂಶಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
108 ಕೋಟಿ ರೂ.ವೆಚ್ಚದಲ್ಲಿ ಬಳ್ಳಾರಿಯಲ್ಲಿ ಮೇಘಾ ಡೈರಿ ಸ್ಥಾಪನೆ, 1368 ಕೋಟಿ ರೂ.ವೆಚ್ಚದಲ್ಲಿ ಬಳ್ಳಾರಿಗೆ ತುಂಗಾಭದ್ರಾ ಜಲಾಶಯದಿಂದ ನೇರವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.

ಹೈಕ ಹೋರಾಟ ಸಮಿತಿ ಅಧ್ಯಕ್ಷ ಸಿರಿಗೆರೆ ಪೊನ್ನರಾಜ್ ಅವರು ಹೈಕ ಹೋರಾಟ ಮತ್ತು ವಿಮೋಚನಾ ಇತಿಹಾಸ ಹಾಗೂ ಬಳ್ಳಾರಿ ಪಾತ್ರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಮೇಯರ್ ಸುಶೀಲಾಬಾಯಿ, ಉಪಮೇಯರ್ ಲಕ್ಷ್ಮೀದೇವಿ, ಪಾಲಿಕೆ ಸದಸ್ಯರಾದ ವೆಂಕಟರಮಣ, ಶ್ರೀನಿವಾಸ ಮೋತ್ಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು,ಶಿಕ್ಷಕರು ಇದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link