ಜಾನಪದ ಜೀವನ ಮೌಲ್ಯದ ಸೂಕ್ಷ್ಮತೆ ಅಳೆಯುವ ಸಾಧನವಾಗಿದೆ

ಹೂವಿನಹಡಗಲಿ :

       ಜೀವನದ ಮೌಲ್ಯದ ಸೂಕ್ಷ್ಮತೆ ಅಳೆಯುವ ಸಾಧನವಾಗಿ ಜಾನಪದ ಸಾಹಿತ್ಯ ರೂಪುಗೊಂಡಿದೆ ಎಂದು ಹಿರಿಯ ಸಾಹಿತಿ ತೋ.ಮ.ಶಂಕ್ರಯ್ಯ ಅಭಿಪ್ರಾಯಪಟ್ಟರು.

    ಪಟ್ಟಣದ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದ (ಐ.ಟಿ.ಐ.) ಕಾಲೇಜಿನಲ್ಲಿ ಮಲ್ಲಿಗೆ ಯುವಕ ಸಂಘ ಹಾಘೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಯೋಘದಲ್ಲಿ ನಡೆದ ಗೀ ಗೀಪದಗಳು ಮತ್ತು ತಬಲಾ ಸೋಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ಇಂದು ನವೀನ ಸಾಹಿತ್ಯ ಮತ್ತು ಹಾಸ್ಯಕ್ಕೆ ಜೋತುಬಿದ್ದು ಯುವ ಜನತೆ ಜಾನಪದದಿಂದ ದೂರವಿರುವುದು ವಿಷಾದ ಸಂಗತಿಯಾಗಿದ್ದು, ಎಲ್ಲಾ ಸಾಹಿತ್ಯದ ಮೂಲಬೇರಾದ ಜಾನಪದ ಸಾಹಿತ್ಯವು ಪ್ರಪಂಚದ ಎಲ್ಲಾ ಕಡೆ ತನ್ನ ವಿಸ್ತಾರತೆ ಹೊಂದಿದೆ ಎಂದರು.

        ಜಾನಪದ ಸಾಹಿತ್ಯವು ಆಕಾಶದಷ್ಟು ವಿಶಾಲ ಮತ್ತು ಸಾಗರದಷ್ಟು ಆಳವಾಗಿದ್ದು, ಓದದೇ ಇರುವ ದುಡಿಯುವ ವರ್ಗದ ಜನ ಅನೇಕ ಕಾವ್ಯಗಳ ಮೂಲಕ ಜಾನಪದವನ್ನು ಸರಳಭಾಷೆಯಾಗಿ ಪಸರಿಸಿದ್ದು, ಸಂಗೀತ ಹಾಡು, ಪರಂಪರೆ ನಂಬಿಕೆ ಮಾರ್ಗೋಪಾಯ ಮತ್ತು ಔಷಧೀಯ ಗುಣವನ್ನು ಹೊಂದಿ, ಗಾದೆ ಒಗಟು, ಗೀಗೀ ಪದ ಹಂತಿಪದ, ತತ್ವಪದ ಲಾವಣಿ ಮತ್ತು ವಿವಿಧ ಪ್ರಕಾರಗಳ ಮೂಲಕ ಜಾನಪದ ಸಾಹಿತ್ಯವು ಸತ್ವ ಭರಿತವಾಗಿ ಬೆಳೆದು ನಿಂತಿರುವುದಾಗಿ ತಿಳಿಸಿದರು.

        ಜಾನಪದ ಸಾಹಿತ್ಯವು ಪಾರಂಪರಿಕ ಸಾಹಿತ್ಯವಾಗಿದ್ದು, ಪರಿವರ್ತನೆ ಶೀಲತೆಯನ್ನು ಹೊಂದಿ, ಪರಂಪರೆಯ ಬಂಡವಾಳವಾಗಿದೆ. ನಮ್ಮದೇ ತಾಲೂಕಿನ ಗ್ರಾಮೀಣ ಭಾಗದ ಕೆ.ಸಿ.ಪರಶುರಾಮ ಜಾನಪದವನ್ನೆ ಕಾಯಕವನ್ನಾಗಿಕೊಂಡು ಮಲ್ಲಿಗೆ ನಾಡಾದ ಹೂವಿನಹಡಗಲಿಯಿಂದ ದೂರದ ಮಿಜೋರಾಂ, ಬಾಂಗ್ಲೋ ದೇಶದವರೆಗೆ ಜಾನಪದವನ್ನು ವೇದಿಕೆಗಳಲ್ಲಿ ಪ್ರದರ್ಶಿಸಿ ಮೆಚ್ಚುಗೆ ಪಾತ್ರರಾಗಿರುವುದು ಎಲ್ಲರೂ ಹೆಮ್ಮೆ ಪಡುವ ವಿಷಯವಾಗಿದ್ದು, ವಿದ್ಯಾರ್ಥಿ ಯುವಜನತೆ ಜಾನಪದ ಶಿಬಿರಗಳಲ್ಲಿ ಭಾಗವಹಿಸಿ, ಜಾನಪದ ಸಾಹಿತ್ಯವನ್ನು ಅಭ್ಯಾಸಿಸಿ ನಮ್ಮನಾಡಿನ ಜಾನಪದ ಸಂಸ್ಕತಿಯನ್ನು ಉಳಿಸಿ ಬೆಳೆಸಲು ಮುಂದಾಗಲು ಕರೆ ನೀಡಿದರು.

          ಹಣಕಾಸು ಸಾಕ್ಷರತಾ ಕೇಂದ್ರದ ಸಲಹೆಗಾರ ವಿ.ಲಿಂಗರಾಜ ಮಾತನಾಡಿದರು. ಮಲ್ಲಿಗೆ ಯುವಕ ಸಂಘದ ಮಂಜುನಾಥ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಕೃಪಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹೆಚ್.ಚಂದ್ರಪ್ಪ ಮತ್ತು ತಂಡ ನಾಗತಿಬಸಾಪುರ ಇವರಿಂದ ಗೀಗೀ ಪದಗಳು ಹಾಗೂ ರಾಮಪ್ಪ ಟಿ ಮಾಗಳ ತಬಲಾ ಸೂಲ್ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ಚಂದ್ರಶೇಖರ ಸ್ವಾಗತಿಸಿ, ಜಾನಪದ ಕಲಾವಿದ ಕೆ.ಸಿ.ಪರಶುರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link