ಬಳ್ಳಾರಿ:
ಕೇವಲ ವಿಶ್ವಕರ್ಮ ಸಮುದಾಯದ ಮಾತ್ರವಲ್ಲದೇ ಇಡೀ ಜಗತ್ತಿನ ಎಲ್ಲಾ ಸಮುದಾಯಗಳು ಆಚರಣೆ ಮಾಡುವಂತಹ ಜಯಂತಿ ಶ್ರೀ ವಿಶ್ವಕರ್ಮ ಜಯಂತಿ ಎಂದು ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಅವರು ಬಣ್ಣಿಸಿದರು.
ವಿಶ್ವಕರ್ಮ ಜಯಂತಿ ನಿಮಿತ್ತ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಕ್ತಿ ಪೂರ್ವಕವಾಗಿ ನೋಡುವಂತಹ ಸಮಾಜ ವಿಶ್ವಕರ್ಮ ಸಮಾಜ. ಸಮಾಜದ ಏಳಿಗೆಗಾಗಿ ನನ್ನ ಬೆಂಬಲ ಸದಾ ಇರುತ್ತದೆ ಎಂದು ಹೇಳಿದ ಅವರು ಸಮುದಾಯದ ಜನರು ಸಂಘಟಿತರಾಗಬೇಕು ಮತ್ತು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು. ಸಮುದಾಯದ ಮುಖಂಡರಾದ ಶ್ರೀಶೈಲಪ್ಪ ಅವರು ಹಾಸ್ಟೆಲ್‍ನ್ನು ಕಟ್ಟಿಸಿ ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿದಕ್ಕೆ ಅವರನ್ನು ಅಭಿನಂದಿಸಿದರು.
ಸರ್ಕಾರದ ವತಿಯಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮಗಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕನ್ನಡ ವಿಶ್ವವಿದ್ಯಾಲಯದಲ್ಲಿ ಅಥವಾ ವಿಎಸ್‍ಕೆ ವಿಶ್ವವಿದ್ಯಾಲಯದಲ್ಲಿ ವಿಶ್ವಕರ್ಮ ಅಧ್ಯಾಯನ ಪೀಠವನ್ನು ಸ್ಥಾಪನೆ, ಪ್ರತ್ಯೇಕ ಸಮುದಾಯ ಭವನ, ಸರ್ಕಾರ ಎಲ್ಲಾ ಕಚೇರಿಗಳಲ್ಲಿ ವಿಶ್ವಕರ್ಮ ಜಯಂತಿ ಮಾಡಲು ಹಾಗೂ ನಗರದ ಯಾವುದಾದರೂ ಒಂದು ವೃತ್ತಕ್ಕೆ ವಿಶ್ವಕರ್ಮ ಹೆಸರಿನ ಮೇಲೆ ನಾಮಕರಣ ಮಾಡುವಂತೆ ಶಾಸಕರಿಗೆ ಸಮಾಜದ ಮುಖಂಡರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಪಕರು ಹಾಗೂ ಮುಖ್ಯಸ್ಥರಾಗಿರುವ ಡಾ.ಗಂಗಾಧರ ದೈವಜ್ಞ ಅವರು ವಿಶೇಷ ಉಪನ್ಯಾಸ ನೀಡಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಅವರು ಸ್ವಾಗತಿಸಿ ವಂದಿಸಿದರು.ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ಸ.ಸೋನಾರ, ಡಿ.ಹಿರೇಹಾಳ್‍ನ ಸರಸ್ವತಿ ಮೂಲ ಪೀಠದ ಆನೆಗುಂದಿ ಮೂಲ ಸಂಸ್ಥಾನದ ಶಿವಕುಮಾರ ಮಹಾಸ್ವಾಮಿಗಳು, ಸೇರಿದಂತೆ ಸಮಾಜದ ಮುಖಂಡರಾದ ನಿವೇದಿತ, ಮೌನೇಶ್, ಶ್ರೀಶೈಲಾ ಆರ್ಚರ್, ಶೇಖರ್, ಗಿರಿಧರ್ ಲಾಲ್ ಮತ್ತಿತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ