ದಾವಣಗೆರೆ:
ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಪದವಿಪೂರ್ವ ಶಿಕ್ಷಣ ಇಲಾಖೆ ಪುಷ್ಪಶಾಮನೂರು ಮಹಾಲಿಂಗಪ್ಪ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ 2018-19ನೇ ಸಾಲಿನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವುದರಿಂದ ಮನಸ್ಸು ಅರಳುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಎಲ್ಲಾ ವಿಚಾರಗಳು ಗ್ರಹಿಸುವುದಕ್ಕೂ ಅನುಕೂಲವಾಗಲಿದೆ. ಇಡೀ ಪ್ರಪಂಚದಲ್ಲಿ ಯಾವುದಾದರು ಜೀವಿ ಸಸ್ಯಲೋಕದಲ್ಲಿ ನೈಸರ್ಗಿಕವಾಗಿ ಜೀವನ ಹೇಗೆ ನಡೆಸುತ್ತಿದೆ ಎನ್ನುವುದನ್ನು ತಿಳಿದುಕೊಂಡರೆ ಕ್ರೀಡೆಯ ಮಹತ್ವವೆನ್ನೆಂಬುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೆಳೆಯನ್ನು ಬಿತ್ತನೆ ಮಾಡಬೇಕಾದರೆ ಮೊದಲು ತಯಾರಿ, ಸಿದ್ದತೆ. ನಂತರ ಬಿತ್ತನೆ ಮಾಡಿದ ಬಳಿಕ ಫಲ ದೊರೆಯುತ್ತದೆ. ಕ್ರೀಡೆಯೂ ಸಹ ಅದೇ ರೀತಿಯಲ್ಲಿ ನಿತ್ಯವು ಶ್ರಮದಿಂದ ಭಾಗವಹಿಸುವುದರಿಂದ ಯಶಸ್ಸು ಗಳಿಸುವುದಕ್ಕೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ದಿನನಿತ್ಯ 2-3 ಗಂಟೆಗಳ ಕಾಲ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಓದುವುದಕ್ಕೆ ಶಾಂತಿಬೇಕಾಗಿದ್ದು, ಅದನ್ನು ಕ್ರೀಡೆಯಿಂದ ಪಡೆದುಕೊಳ್ಳಬಹುದು ಎಂದರು.
ಜಿ.ಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾತನಾಡಿ, ಕ್ರೀಡೆಯಲ್ಲಿ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಾಗಿ ಭಾಗವಹಿಸುತ್ತಾರೆ. ವಲಯ ಮಟ್ಟದಲ್ಲಿ ಆಟದ ಮೈದಾನಗಳು ಇರುವುದಿಲ್ಲ, ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಗ್ರಾಮೀಣ ಭಾಗದ ಕ್ರೀಡಾಪಟುಗಳು ಹೆಚ್ಚಾಗಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ತೀರ್ಪುಗಾರರು ಪಕ್ಷಾಪತ ಮಾಡದೆ ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆಮಾಡಿ ಮುಂದಿನ ಹಂತಕ್ಕೆ ಕಳುಹಿಸಬೇಕಾಗಿದೆ. ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆಯ ಜೊತೆಗೆ ಓದಿನ ಕಡೆಗೆ ಶ್ರದ್ದೆವಹಿಸಬೇಕೆಂದು ಕರೆ ನೀಡಿದರು.
ಈ ವೇಳೆ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಆರು ವಿದ್ಯಾರ್ಥಿಗಳಿಗೆ ಲ್ಯಾಬ್ ಟಾಪ್ ಗಳನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್, ಮಮತಾ, ರಾಜಶೇಖರ್, ಮಲ್ಲಿಕಾರ್ಜುನಯ್ಯ, ಪರಮೇಶ್ವರಪ್ಪ, ನಾಗರಾಜ್, ಭಾರತಿ, ದೀಪಾ, ಗಣೇಶ್, ಗಿರಿಯಪ್ಪ, ಕಿರಣ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








