ತುಮಕೂರು: – ಆರ್.ಎಸ್.ಅಯ್ಯರ್

ತುಮಕೂರು ಮಹಾನಗರ ಪಾಲಿಕೆಯ ಹೊಸ ಕಚೇರಿ ಕಟ್ಟಡ ಭರದಿಂದ ತಲೆಯೆತ್ತುತ್ತಿರುವಂತೆಯೇ, ‘ವಾಹನ ಪಾರ್ಕಿಂಗ್’ ಎಲ್ಲಿ? ಮತ್ತು ಹೇಗೆ? ಎಂಬ ತಲೆನೋವು ಈಗ ಎಲ್ಲರನ್ನೂ ನಿಧಾನವಾಗಿ ಕಾಡತೊಡಗಿದೆ. ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಅತ್ತಿಂದಿತ್ತ ಸಂಚರಿಸುವ ಸಾರ್ವಜನಿಕರೆಲ್ಲರ ಪ್ರಶ್ನೆಯೂ ಈಗ ಇದೇ ಆಗಿದೆ.
ತುಮಕೂರು ಮಹಾನಗರ ಪಾಲಿಕೆಯ ಆವರಣದಲ್ಲೇ ಅತ್ಯಾಧುನಿಕ ರೀತಿಯಲ್ಲಿ, ಎಲ್ಲವೂ ಒಂದೇ ಸೂರಿನಡಿ ಇರುವಂತೆ ಸುಸಜ್ಜಿತ ಹೊಸ ಕಚೇರಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಪಾಲಿಕೆಯ ಆವರಣದ ಅರಳೀಕಟ್ಟೆಯ ದಕ್ಷಿಣಕ್ಕೆ ಇದ್ದ ಹಳೆಯ ಕಟ್ಟಡವನ್ನು ಕೆಡವಿ, ಅಲ್ಲಿದ್ದ ಮರಗಳನ್ನು ತೆರವುಗೊಳಿಸಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಕಟ್ಟಡ ಒಂದು ಹಂತಕ್ಕೆ ಬರುತ್ತಿದೆ. ಅದನ್ನು ನೋಡುತ್ತಿರುವಂತೆಯೇ ಈಗ ‘ವಾಹನ ಪಾರ್ಕಿಂಗ್’ ಪ್ರಶ್ನೆ ಎದುರಾಗುತ್ತಿದೆ.
ಒಟ್ಟು 5 ಕೋಟಿ 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಈ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಮೊತ್ತದಲ್ಲಿ ನೆಲ ಅಂತಸ್ತು (ಗ್ರೌಂಡ್ ಫ್ಲೋರ್) ಮತ್ತು ಮೊದಲನೇ ಅಂತಸ್ತು (ಫಸ್ಟ್ ಫ್ಲೋರ್) ನಿರ್ಮಾಣವಾಗಲಿದೆ. ಆನಂತರದ ಇನ್ನೆರಡು ಅಂತಸ್ತುಗಳಲ್ಲಿ ತಾವೇ ತಮ್ಮ ಹಣದಿಂದಲೇ ತಮ್ಮ ಕಂಪನಿ ಕಚೇರಿಗಾಗಿ ಕಟ್ಟಡ ಕಟ್ಟಿಕೊಳ್ಳುವುದಾಗಿ ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯು ಮಹಾನಗರ ಪಾಲಿಕೆಗೆ ಕೋರಿದ್ದು, ಪಾಲಿಕೆ ಸಭೆಯು ಇದಕ್ಕೆ ಸಮ್ಮತಿಸಿದೆ. ಒಂದೇ ಕಟ್ಟಡದಲ್ಲಿ ಇಷ್ಟೆಲ್ಲ ಕಚೇರಿಗಳು ಬರುವಾಗ, ಚಟುವಟಿಕೆಗಳು ನಡೆಯುವಾಗ ಅತ್ಯಂತ ಮೂಲಭೂತ ಸೌಕರ್ಯಗಳಲ್ಲೊಂದಾದ ‘ವಾಹನ ನಿಲುಗಡೆ’ಗೆ ಏನು ಮಾಡಲಾಗುತ್ತದೆಂಬುದೇ ಈಗಿನ ಒಗಟಿನ ಪ್ರಶ್ನೆ.
ಪಾಲಿಕೆಯಲ್ಲೇ ಸ್ಪಷ್ಟತೆಯಿಲ್ಲ!
“ಪಾಲಿಕೆಗೆ ಹೊಸ ಕಟ್ಟಡ ಬರುತ್ತಿದೆ. 35 ಚುನಾಯಿತ ಸದಸ್ಯರಿದ್ದಾರೆ. ಐವರು ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಬಹುತೇಕ ಇವರೆಲ್ಲರೂ ಕಾರುಗಳಲ್ಲೇ ಬರುತ್ತಾರೆ. ಇನ್ನು ಪಾಲಿಕೆಯ ಅಧಿಕಾರಿಗಳಿಗೆ ಅಧಿಕೃತ ಕಾರುಗಳಿರುತ್ತವೆ. ಅಲ್ಲದೆ ಪಾಲಿಕೆಯ ಇತರೆ ಅಧಿಕಾರಿ-ನೌಕರರು ತಮ್ಮ ಸ್ವಂತ ವಾಹನಗಳಲ್ಲಿ (ಕಾರು/ಬೈಕ್) ಬರುತ್ತಾರೆ. ಇವರನ್ನು ಹೊರತುಪಡಿಸಿ ಪ್ರತಿನಿತ್ಯ ವಿವಿಧ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ವಿವಿಧ ವಾಹನಗಳಲ್ಲಿ ಬರುತ್ತಿರುತ್ತಾರೆ. ಇವರೆಲ್ಲರ ವಾಹನಗಳ ನಿಲುಗಡೆಗೆ ಏನು ವ್ಯವಸ್ಥೆ ಮಾಡಲಾಗಿದೆ? ಯಾವ ಜಾಗವನ್ನು ನಿಗಧಿ ಮಾಡಲಾಗಿದೆ? ಇತರೆಲ್ಲ ಕಟ್ಟಡ ನಿರ್ಮಾಣಕ್ಕೆ ಪಾರ್ಕಿಂಗ್ಗಾಗಿ ಸೆಲ್ಲರ್ ನಿರ್ಮಿಸಬೇಕೆಂಬ ನಿಯಮವಿರುವಾಗ, ಪಾಲಿಕೆ ಕಚೇರಿಗೇ ಸೆಲ್ಲರ್ ಇಲ್ಲವೇಕೆ? ಸೆಲ್ಲರ್ ನಿರ್ಮಿಸಿದ್ದರೆ ಅರ್ಧದಷ್ಟು ಪಾರ್ಕಿಂಗ್ ಸಮಸ್ಯೆ ನಿವಾರಣೆ ಆಗುತ್ತಿತ್ತಲ್ಲವೇ?” ಎಂಬಿತ್ಯಾದಿ ಸಹಜ ಪ್ರಶ್ನೆಗಳನ್ನು ಮುಂದಿಟ್ಟರೆ, ಪಾಲಿಕೆಯ ಯಾವ ಅಧಿಕಾರಿಗಳಿಂದಲೂ ಅಧಿಕೃತವಾದ ಸ್ಪಷ್ಟ ಉತ್ತರ ಲಭಿಸುತ್ತಿಲ್ಲ!
ಸೆಲ್ಲರ್ ಗೆ ಅನುಮತಿ ಸಿಗಲಿಲ್ಲವಂತೆ!
ಒಂದು ಮೂಲದ ಪ್ರಕಾರ, “ಪಾಲಿಕೆಯು ಮೊದಲಿಗೆ ಸೆಲ್ಲರ್ ನಿರ್ಮಿಸುವ ಉದ್ದೇಶ ಹೊಂದಿತ್ತಂತೆ. ಅದೇ ರೀತಿ ನಕ್ಷೆಯನ್ನೂ ಸಿದ್ಧಪಡಿಸಿತ್ತಂತೆ. ಆದರೆ ಸರ್ಕಾರದ ಮಟ್ಟದಲ್ಲಿ ಇದಕ್ಕೆ ಅನುಮತಿ ಲಭಿಸಲಿಲ್ಲವಂತೆ. ಕಾರಣ- ಸೆಲ್ಲರ್ ನಿರ್ಮಿಸಿದರೆ ಅದು ದುರ್ಬಳಕೆ ಆಗದಂತೆ ಸದಾ ಎಚ್ಚರವಹಿಸಬೇಕಲ್ಲದೆ, ಅದನ್ನು ನಿರ್ವಹಣೆ ಮಾಡುವ ದೊಡ್ಡ ಹೊಣೆ ಇರಬೇಕಾಗುತ್ತದೆ. ಆದ್ದರಿಂದ ಸೆಲ್ಲರ್ ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತಂತೆ! ಆಗ ಮತ್ತೆ ನಕ್ಷೆಯಲ್ಲಿ ಬದಲಾವಣೆ ಮಾಡಿ, ನೆಲ ಅಂತಸ್ತಿನಿಂದಲೇ ಕಟ್ಟಡ ಕಟ್ಟುವ ನಿರ್ಧಾರಕ್ಕೆ ಬಂದ ಮೇಲೆ ಅದಕ್ಕೆ ಅನುಮತಿ ಲಭಿಸಿತಂತೆ!”. ಇದು ನಿಜವೇ ಆಗಿದ್ದರೆ, ಮಹಾನಗರ ಪಾಲಿಕೆಯು ಒಂದು ಸೆಲ್ಲರ್ ನಿರ್ವಹಣೆ ಮಾಡಲಾಗದಷ್ಟು ಅಶಕ್ತವಾಗಿದೆಯೆಂದಂತಾಯಿತು.
3 ಕಾರಣಗಳಿರಬಹುದು!
ಇದೇ ವಿಷಯವನ್ನು ಪಾಲಿಕೆಯಲ್ಲಿ ಕೆದಕಿದಾಗ ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ಸಮಜಾಯಿಷಿಯ ಧಾಟಿಯಲ್ಲಿ ಉದ್ಗರಿಸಿದ್ದು ಹೀಗೆ:- “ಹೌದು ಸರ್, ಮೊದಲನೆಯದಾಗಿ ಸೆಲ್ಲರ್ ನಿರ್ಮಾಣ ದುಬಾರಿ. ಮಳೆ ನೀರು ನುಗ್ಗದಂತೆ, ಒಳಗೆ ನೀರು ನುಗ್ಗಿದರೆ ಅದು ಮುಂದಕ್ಕೆ ಹರಿಯುವಂತೆ ಹಾಗೂ ಸುತ್ತಲೂ ಮಣ್ಣು ಕುಸಿಯದಂತೆ ವಿಶೇಷ ನಿರ್ಮಾಣ ಆಗಬೇಕಾಗುತ್ತದೆ. ಅದಕ್ಕೆ ವೆಚ್ಚವಾಗುವ ಹಣದಲ್ಲಿ ಕಟ್ಟಡದ ಇತರೆ ಭಾಗ ನಿರ್ಮಿಸಬಹುದು. ಆದ್ದರಿಂದ ಸೆಲ್ಲರ್ ವಿಷಯ ಕೈಬಿಟ್ಟಿರಬಹುದು. ಎರಡನೆಯದಾಗಿ ಸೆಲ್ಲರ್ ನಿರ್ವಹಣೆ ತುಂಬ ಕಷ್ಟ. ಖಾಸಗಿಯಲ್ಲಾದರೆ ಸೆಕ್ಯೂರಿಟಿ ಗಾರ್ಡ್ಗಳನ್ನಿಟ್ಟು ಗಮನಿಸುತ್ತಾರೆ. ಆದರೆ ಪಾಲಿಕೆಯಲ್ಲಿ ಇವೆಲ್ಲ ಕಷ್ಟಸಾಧ್ಯ. ಈಗಲೇ ಪಾಲಿಕೆಯಲ್ಲಿ ಸೆಕ್ಯೂರಿಟಿ ಗಾರ್ಡ್ಗಳಿಲ್ಲ. ಇನ್ನು ಇಂಥ ವ್ಯವಸ್ಥೆ ಮಾಡಿದಾಗ ಸೆಕ್ಯೂರಿಟಿ ಗಾರ್ಡ್ಗಳು ಇಲ್ಲದಿದ್ದರೆ ಹೇಗೆ? ಜೊತೆಗೆ ಸೆಲ್ಲರ್ ಬಗ್ಗೆ ನಿಗಾ ಇಡದಿದ್ದರೆ ಇಲ್ಲಿ ಅನರ್ಥಗಳಾಗುವ ಸಂಭವವೂ ಇರುತ್ತದೆ. ಆದ್ದರಿಂದ ಇದನ್ನು ಕೈಬಿಟ್ಟಿರಬಹುದು. ಮೂರನೆಯದಾಗಿ ಪಾಲಿಕೆ ಆವರಣದಲ್ಲಿ ವಿಶಾಲವಾದ ಸ್ಥಳಾವಕಾಶವಿದೆ. ಎಲ್ಲಾದರೂ ವಾಹನ ನಿಲುಗಡೆ ಮಾಡಬಹುದು. ಆದ ಕಾರಣ ವಾಹನ ನಿಲುಗಡೆಗೆ ಸಮಸ್ಯೆ ಆಗದೆಂದು ಈ ವಿಷಯವನ್ನು ಕೈಬಿಟ್ಟಿರಬಹುದು”.
ಬಹುಮಹಡಿ ಪಾರ್ಕಿಂಗ್ ಯೋಜನೆಯ ಉದ್ದೇಶವಿತ್ತು
ಮತ್ತೊಂದು ಮೂಲದ ಪ್ರಕಾರ, “ಪಾಲಿಕೆಗೆ ಹೊಸ ಕಚೇರಿ ಕಟ್ಟಡ ನಿರ್ಮಿಸಲು ಮುಂದಾದಾಗ ‘ವಾಹನ ಪಾರ್ಕಿಂಗ್’ ಬಗ್ಗೆಯೂ ಆಲೋಚಿಸಲಾಗಿತ್ತು. ಆಗ ಈ ಹೊಸ ಕಟ್ಟಡದ ಹಿಂಬದಿಯ ಖಾಲಿ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ‘ಹಣ ಪಾವತಿಸಿ ಉಪಯೋಗಿಸುವ’ (ಪೇ ಅಂಡ್ ಯೂಸ್) ಮಾದರಿಯಲ್ಲಿ ‘ಬಹುಮಹಡಿ ವಾಹನ ನಿಲುಗಡೆ ಕಟ್ಟಡ’ (ಮಲ್ಟಿ ಸ್ಟೋರೀಡ್ ವೆಹಿಕಲ್ ಪಾರ್ಕಿಂಗ್) ನಿರ್ಮಿಸುವ ಯೋಜನೆಯಿತ್ತು. ಆದರೆ ಈ ನಡುವೆ ಇಂದಿರಾ ಕ್ಯಾಂಟೀನ್ಗಾಗಿ ಇದೇ ಜಾಗವನ್ನು ಆರಿಸಿಕೊಂಡಿದ್ದರಿಂದ ಉದ್ದೇಶಿತ ಯೋಜನೆಗೆ ಈಗ ಜಾಗದ ಕೊರತೆ ಎದ್ದು ಕಾಣುತ್ತಿದೆ” ಎನ್ನಲಾಗುತ್ತಿದೆ.
‘ವಾಹನ ಪಾರ್ಕಿಂಗ್’ಗೆ ಸಮಸ್ಯೆ ಆಗುವುದನ್ನು ಪಾಲಿಕೆಯ ಅಧಿಕಾರಿಗಳು ಮುಜುಗರದಿಂದಲೇ ಒಪ್ಪಿಕೊಳ್ಳುತ್ತಾರೆ. ಆದರೆ ಇದಕ್ಕೆ ಪರಿಹಾರವಾಗಿ, “ಈಗ ಇಂಜಿನಿಯರಿಂಗ್ ಮೊದಲಾದ ಶಾಖೆಗಳು ಕಾರ್ಯನಿರ್ವಹಿಸುತ್ತಿರುವ ಹಳೆಯ ಸರ್ವೋದಯ ಕಾಲೇಜು ಕಟ್ಟಡ ಈಗಾಗಲೇ ಶಿಥಿಲವಾಗಿದ್ದು, ಅದನ್ನು ಕೆಡವಿ ಅಲ್ಲಿ ‘ಬಹುಮಹಡಿ ವಾಹನ ಪಾರ್ಕಿಂಗ್’ ವ್ಯವಸ್ಥೆ ಮಾಡಬಹುದು” ಎನ್ನುತ್ತಾರೆ. ಆದರೆ ಅದು ಯಾವಾಗ? ಎಷ್ಟು ದಿನಗಳಲ್ಲಿ ಸಾಧ್ಯವಾದೀತು? ಅದಕ್ಕೆ ಈಗಲೇ ರೂಪುರೇಷೆ ಹಾಕಿಕೊಳ್ಳಲಾಗಿದೆಯೇ? ಎಂಬಂತಹ ಪ್ರಶ್ನೆಗಳಿಗೆ ಸದ್ಯಕ್ಕೆ ಯಾರಲ್ಲಿಯೂ ಉತ್ತರವಿಲ್ಲ.
ಈಗಲೇ ತಲೆಯೆತ್ತಿರುವ ಸಮಸ್ಯೆ
ಪಾಲಿಕೆ ಕಚೇರಿಯ ಆವರಣದಲ್ಲಿ ಈಗಲೇ ವಾಹನ ನಿಲುಗಡೆಯ ಸಮಸ್ಯೆ ಅತಿಯಾಗಿ ಕಾಡತೊಡಗಿದೆ. ಆವರಣದೊಳಗಿನ ಮಧ್ಯಭಾಗದಲ್ಲಿ ಹೊಸ ಕಚೇರಿ ಕಟ್ಟಡ ನಿರ್ಮಾಣವಾಗುತ್ತಿದ್ದು, ವಾಹನ ನಿಲುಗಡೆಗೆ ಸಾರ್ವಜನಿಕರು ಪರದಾಡುತ್ತಿರುತ್ತಾರೆ. ಪಾಲಿಕೆಯ ಸದಸ್ಯರುಗಳ, ಅಧಿಕಾರಿಗಳ ವಾಹನ ನಿಲುಗಡೆಗೇ ನಿಗದಿತ ಸ್ಥಳಾವಕಾಶವಿಲ್ಲ. ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಹೋಟೆಲ್ಗೆ ಬರುವವರು, ಆಸ್ಪತ್ರೆಗೆ ಬರುವವರು, ರೈಲ್ವೆ ಪ್ರಯಾಣಿಕರು ಇದು ಸುರಕ್ಷಿತ ಸ್ಥಳವೆಂದು ತಮ್ಮ ವಾಹನಗಳನ್ನೂ ಇಲ್ಲೇ ನಿಲುಗಡೆ ಮಾಡುತ್ತಾರೆಂಬ ದೂರುಗಳಿವೆ. ಇತ್ತ ಕೃಷ್ಣರಾಜೇಂದ್ರ ಪುರಭವನದಲ್ಲೇ ತುಮಕೂರು ನಗರದ ‘ಶಾಸಕರ ಕಚೇರಿ’ಯೂ ಇರುವುದರಿಂದ ಅಲ್ಲಿಗೆ ಬರುವವರ ವಾಹನಗಳಿಗೂ ನಿಲುಗಡೆ ಸಮಸ್ಯೆ ಕಾಡುತ್ತಿದೆ. ಇನ್ನು ಹಿಂಬದಿಯ ‘ತುಮಕೂರು ಒನ್’ಗೆ ಬರುವವರೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಸಾಲದೆಂಬಂತೆ ತುಮಕೂರು ಕ್ಲಬ್ ಗೂ ಇಲ್ಲೇ ಪ್ರವೇಶ ದ್ವಾರ ಇರುವುದರಿಂದ ಅಲ್ಲಿಗೆ ಬರುವ ವಾಹನಗಳೂ ಇಲ್ಲೇ ನಿಲುಗಡೆ ಆಗುತ್ತಿರುವುದರಿಂದ ಈಗ ಇಡೀ ಪಾಲಿಕೆ ಕಚೇರಿ ಆವರಣವೇ ಒಂದು ರೀತಿ ‘ವಾಹನ ಪಾರ್ಕಿಂಗ್ ಪ್ರದೇಶ’ ಆದಂತಿದೆ! ಇನ್ನು ಹೊಸ ಕಚೇರಿ ಕಟ್ಟಡ ಬಂದಮೇಲೆ ಏನಾದೀತು? ಎಂಬುದೇ ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ. “ಹೊಸ ಕಚೇರಿ ಕಟ್ಟಡ ಕಟ್ಟಲು ಸರ್ವಾನುಮತದ ಒಪ್ಪಿಗೆ ಸೂಚಿಸಿದ ಹಿಂದಿನ ಮಹಾನಗರ ಪಾಲಿಕೆಯ ಚುನಾಯಿತ ಮಂಡಲಿಯೂ ‘ವಾಹನ ಪಾರ್ಕಿಂಗ್’ ವಿಷಯದಲ್ಲಿ ಮುಂದಾಲೋಚನೆ ಮಾಡದಿದ್ದುದು ಅಕ್ಷಮ್ಯ” ಎಂದು ಹೋರಾಟಗಾರರು ಟೀಕಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








