ಬೆಂಗಳೂರು
ಪಾರ್ಟಿ ಮಾಡಿ ಕುಡಿದ ಅಮಲಿನಲ್ಲಿ ಯುವತಿಯ ವಿಚಾರವಾಗಿ ಜಗಳ ಮಾಡಿಕೊಂಡು ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆಗೈದು ಮತ್ತೊಬ್ಬನಿಗೆ ಇರಿದು ಯುವಕನೊಬ್ಬ ಪರಾರಿಯಾಗಿರುವ ದುರ್ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗಾರೆಬಾವಿಪಾಳ್ಯದಲ್ಲಿ ನಡೆದಿದೆ.
ಕುಡಿತದ ಅಮಲಿನಲ್ಲಿ ಯುವತಿಯ ವಿಷಯವಾಘಿ ಜಗಳ ಮಾಡಿಕೊಂಡು ಮಂಡ್ಯ ಮೂಲದ ಯಶವಂತ್(24)ಕೊಲೆಗೈದು ಮತ್ತೊಬ್ಬ ಸ್ನೇಹಿತ ಸುನಿಲ್ಗೆ ಚಾಕುವಿನಿಂದ ಇರಿದ ಸ್ವಾಮಿ ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಚಾಕು ಇರಿತದಿಂದ ಗಾಯಗೊಂಡಿರುವ ಸುನಿಲ್ ಆಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ಶಿವಮೊಗ್ಗ ಮೂಲದ ಸ್ವಾಮಿ ಗಾರೆಬಾವಿಪಾಳ್ಯದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದು ಸಂಬಂಧಿಕರು ಊರಿಗೆ ಹೋಗಿದ್ದರಿಂದ ಒಂಟಿಯಾಗಿದ್ದ ಸ್ವಾಮಿ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಸ್ನೇಹಿತರಾದ ಯಶವಂತ್ ಹಾಗೂ ಸ್ವಾಮಿಯನ್ನು ಸೋಮವಾರ ರಾತ್ರಿ ಪಾರ್ಟಿ ಮಾಡಲು ಮನೆಗೆ ಕರೆದಿದ್ದ.
ಅಮಲಿನಲ್ಲಿ ಜಗಳ
ರಾತ್ರಿ ಮೂವರೂ ಸೇರಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದಾರೆ ಮಧ್ಯರಾತ್ರಿ 12ರ ವೇಳೆ ನಿದ್ದೆ ಬರುತ್ತಿದ್ದ ಕಾರಣಕ್ಕೆ ಸುನಿಲ್ ಹೋಗಿ ಮಲಗಿದ್ದು ಕೆಲವೇ ನಿಮಿಷದಲ್ಲಿ ಜೋರಾಗಿ ಕಿರುಚಿದ ಶಬ್ದ ಕೇಳಿ ಸುನಿಲ್ ಎದ್ದು ನೋಡಿದಾಗ ಚಾಕು ಹಿಡಿದಿದ್ದ ಸ್ವಾಮಿಯು ಯಶವಂತನ ಬೆನ್ನು ಹೊಟ್ಟೆ ಇನ್ನಿತರ ಭಾಗಗಳಿಗೆ ಚಾಕುವಿನಿಂದ ಇರಿದಿದ್ದ.
ಬಿಡಿಸಿಕೊಳ್ಳಲು ಮುಂದಾದ ಸುನಿಲ್ನಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಸ್ವಾಮಿ ಪರಾರಿಯಾಗಿದ್ದು ಕೂಡಲೇ ಸ್ನೇಹಿತರನ್ನು ಕರೆದ ಸುನಿಲ್ ತೀವ್ರವಾಗಿ ಗಾಯಗೊಂಡಿದ್ದ ಯಶವಂತ್ನನ್ನು ಸಮೀಪದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಗಾಯಾಳು ಸುನೀಲ್ನನ್ನು ಆಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ,ಬಂಡೇಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿ ಕೃತ್ಯವೆಸಗಿದ ಸ್ವಾಮಿಗಾಗಿ ತೀವ್ರ ಶೋಧ ನಡೆಸಿದ್ದಾರೆ








