ಪುರವರ
ತಾಲ್ಲೂಕಿನ ಪುರವರ ಹೋಬಳಿಯ ಕೋಡ್ಲಾಪುರ ಗ್ರಾಮ ಪಂಚಾಯಿತಿಗೆ ಎಕೆ ಕಾಲನಿಯ ಯುವಕರು ಮತ್ತು ನೊಂದ ಜನತೆ ಮುತ್ತಿಗೆ ಹಾಕಿ ಪಿಡಿಒ ಮತ್ತು ಕಾರ್ಯದರ್ಶಿಗಳನ್ನು ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿದರು. ಸುಮಾರು 100 ಜನ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಮುತ್ತಿಗೆ ಹಾಕಿ ಒತ್ತಾಯಿಸಿದಾಗ, ಗ್ರಾಮ ಪಂಚಾಯಿತಿ ಕಚೇರಿಯ ಒಳಗಡೆ ಪಿಡಿಒ ಮತ್ತು ಕಾರ್ಯದರ್ಶಿಗಳು ಮೌನವಾಗಿ ಕುಳಿತ ಪ್ರಸಂಗ ನಡೆಯಿತು. ನಾವು ಸುಮಾರು 2 ವರ್ಷಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ ಚರಂಡಿ ತೆಗೆಸಿ, ಬೀದಿ ದೀಪ ಹಾಕಿಸಿ ಎಂದು ಗೋಗರೆದರೂ ಕೂಡ ಸ್ಪಂದಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ಕೂಗಾಡಿದ ಪ್ರಸಂಗ ಕೂಡ ನಡೆಯಿತು.
ತಾಲ್ಲೂಕಿನ ಕೋಡ್ಲಾಪುರ ಗ್ರಾಮದ ಮಾದಿಗ ಸಮುದಾಯದ ಕುಟುಂಬಗಳು ಸರ್ಕಾರಿ ಸೌಲಭ್ಯಗಳ ವಂಚನೆಯಿಂದ ಬದುಕುತ್ತಿರುವುದು ದುರದೃಷ್ಟಕರ. ದಲಿತರೆಂದರೆ ನಾಯಿಗಳಂತೆ ನೋಡುವ ಅಧಿಕಾರಿಗಳು, ಹಿಂದುಳಿದ ಗಡಿನಾಡಿನ ಸಮುದಾಯದತ್ತ ಗಮನವಿತ್ತು ಅವರ ಕಷ್ಟಗಳಿಗೆ ಸ್ಪಂದಿಸದಿರುವುದು ಎದ್ದು ಕಾಣುತ್ತಿದೆ. ಪಂಚಾಯಿತಿಯಲ್ಲಿ ಉಳ್ಳವರು ಮಾತ್ರ ಸೌಲಭ್ಯ ಗಿಟ್ಟಿಸಿಕೊಳ್ಳಬಹುದೇ ಹೊರೆತು ಬಡಪಾಯಿಗಳಲ್ಲ. ಅಲ್ಲಿನ ಹೆಂಗಸರು ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ನಾವು ದಿನ ನಿತ್ಯ ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದೇವೆ. ಈ ಚರಂಡಿ ದುರ್ನಾತ ಕುಡಿದು ನಮ್ಮ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ನಾವು ಯಾರನ್ನು ಕೇಳೋಣ? ನಮ್ಮ ಮಕ್ಕಳು ಇಲ್ಲಿಯವರೆಗೂ ಯಾರೂ ಕೂಡ ಉನ್ನತ ಹುದ್ದೆಗೆ ಏಕೆ ಹೋಗುತ್ತಿಲ್ಲ ಎಂದು ತಲೆ ಚಚ್ಚಿಕೊಳ್ಳುತ್ತ ಗೋಳಿಟ್ಟು ಮನೆಕಡೆ ಹೋದರು. ಪಂಚಾಯಿತಿ ಮುಂದೆ ಇರುವ ಶೌಚಾಲಯವನ್ನು ಶುದ್ದ ಪಡಿಸಿಲ್ಲದಿರುವುದು, ಪಂಚಾಯಿತಿಯ ಮುಂದೆ ಇರುವಂತಹ ಬೀದಿ ದೀಪಗಳನ್ನು ಸರಿಪಡಿಸಿಕೊಳ್ಳದಿರುವುದು ಕಂಡುಬಂದಿತು. ಕಾಲನಿಯ ಮಕ್ಕಳು ಅನಾರೋಗ್ಯದಿಂದ ವಾರಕ್ಕೆ ಮೂರ್ನಾಲ್ಕು ಬಾರಿ ಆಸ್ಪತ್ರೆಗೆ ಅಲೆಯುವುದು ಸರ್ವೆ ಸಾಮಾನ್ಯವಾಗಿದೆ. ತಾಲ್ಲೂಕಿನ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ಇದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಮುಷ್ಕರ ಹೂಡುವುದಾಗಿ ಎಚ್ಚರಿಸಿರುತ್ತಾರೆ.








