ಮತ್ತೊಮ್ಮೆ ಮೋದಿ ಸರ್ಕಾರ…!?

ನವದೆಹಲಿ:

     ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಲಿದೆ. ಪ್ರತಿಪಕ್ಷಗಳ ಮಹಾಮೈತ್ರಿ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ, ದೀದಿ, ಮಾಯಾ, ರಾಹುಲ್‌ ನಡೆಸುವ ಸರ್ಕಸ್‌ಗಳ ನಡುವೆಯೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಯುವುದಿಲ್ಲ. ನರೇಂದ್ರ ಮೋದಿ ಅವರು ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಎಬಿಪಿ ಸಿ-ವೋಟರ್‌ ಸಮೀಕ್ಷೆ ತಿಳಿಸಿದೆ.

      ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್.ಡಿ.ಎಗೆ ಸರಳ ಬಹುಮತ ಲಭಿಸಲಿದೆ ಎಂದು ವರದಿ ಬಂದಿದ್ದು, ಲೋಕಸಭೆ ಚುನಾವಣೆಗೆ ಇನ್ನೂ 8 ತಿಂಗಳು ಬಾಕಿ ಉಳಿದಿರುವಾಗ ಸಿವೋಟರ್‌ ನಡೆಸಿದ ‘ದೇಶ್‌ ಕಾ ಮೂಡ್‌’ ಸಮೀಕ್ಷೆ, ಕುತೂಹಲಕಾರಿ ಹಲವು ಸಂಗತಿಗಳನ್ನು ಹೊರಹಾಕಿದೆ.

      ಹಿಂದಿ ಪ್ರಾಬಲ್ಯ ಇರುವ ಉತ್ತರ ಭಾರತದಲ್ಲಿ ಬಿಜೆಪಿ ಈ ಬಾರಿಯೂ ಭರ್ಜರಿ ಪ್ರದರ್ಶನ ನೀಡಲಿದೆ. ಆದರೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ತೆಲಂಗಾಣ ಒಳಗೊಂಡ ದಕ್ಷಿಣ ರಾಜ್ಯಗಳಲ್ಲಿ ಅದರ ಸಾಧನೆ ಕಳೆಗುಂದಲಿದೆ. ದಕ್ಷಿಣದ 129 ಲೋಕಸಭೆ ಸ್ಥಾನಗಳ ಪೈಕಿ ಬಿಜೆಪಿಗೆ ಕೇವಲ 21 ಸ್ಥಾನ ದಕ್ಕಲಿವೆ ಎಂದು ಸಮೀಕ್ಷೆ ಸಾರಿದೆ.  

      ಐದು ವರ್ಷಗಳ ಆಡಳಿತದ ಬಳಿಕವೂ ಎನ್‌ಡಿಎ ಕೂಟ ವರ್ಚಸ್ಸಿಗೆ ಹೆಚ್ಚೇನು ಧಕ್ಕೆ ಆಗುವುದಿಲ್ಲ. ಆದರೆ ತಕ್ಕಮಟ್ಟಿಗೆ ಕಾಂಗ್ರೆಸ್‌ನ ವರ್ಚಸ್ಸು ಸುಧಾರಿಸುವುದರಿಂದ ಹಿಂದಿನ ಬಾರಿಯ ಸಾಧನೆ ಸಾಧ್ಯವಾಗುವುದಿಲ್ಲ. ಆದರೆ 276 ಸ್ಥಾನ ಗೆಲ್ಲುವುದರೊಂದಿಗೆ ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಿವೋಟರ್‌ ತಿಳಿಸಿದೆ.

      ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕಳೆದ ಚುನಾವಣೆಗಿಂತ ತುಸು ಕಡಿಮೆ ಮಟ್ಟದ ಸಾಧನೆ ಮಾಡಲಿದೆ. ಆದರೆ, ಎದುರಾಳಿ ಯುಪಿಎ ಮೈತ್ರಿಕೂಟಕ್ಕೆ ಅಧಿಕಾರ ಬಿಟ್ಟುಕೊಡುವುದಿಲ್ಲ. ಎನ್‌ಡಿಎ ಶೇ.38 ಮತ್ತು ಯುಪಿಎ ಶೇ.25ರಷ್ಟು ಮತ ಗಳಿಕೆ ಮಾಡಲಿವೆ ಎಂದು ಸಮೀಕ್ಷೆ ತಿಳಿಸಿದೆ.

      ಮಹಾಘಟಬಂಧನ ಕಟ್ಟುವಲ್ಲಿ ಯಶಸ್ವಿಯಾದರೂ ಕಾಂಗ್ರೆಸ್‌ ಕೈಗೆ ಅಧಿಕಾರ ದಂಡ ಸಿಕ್ಕುವುದಿಲ್ಲ. ಆದರೆ ಉತ್ತರಪ್ರದೇಶದಲ್ಲಿ ಬಿಎಸ್ಪಿ ಮತ್ತು ಎಸ್ಪಿ ಜತೆ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್‌ಗೆ ಬಹುದೊಡ್ಡ ಮುನ್ನಡೆ ದಕ್ಕಲಿದೆ ಎಂದು ಭವಿಷ್ಯ ನುಡಿದಿದೆ. 

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link