ಚಿತ್ರದುರ್ಗ:
ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತೆ ಹಾಗೂ ಜಾನಪದ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.
ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ವೈಶಾಲಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯುತ್ತಿರಬೇಕು. ನಗರ ಪ್ರದೇಶಕ್ಕಿಂತ ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಪ್ರತಿಭಾವಂತರಿರುತ್ತಾರೆ. ಅಂತಹ ಮಕ್ಕಳನ್ನು ಗುರುತಿಸಿ ಬೆಳಕಿಗೆ ತರುವಂತ ಕೆಲಸವನ್ನು ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕೆಲವೊಮ್ಮೆ ಪ್ರತಿಭಾವಂತರು ಅವಕಾಶಗಳಿಂದ ವಂಚಿತರಾಗುವುದುಂಟು. ಹಾಗಾಗಿ ಮಕ್ಕಳ ದಿನಾಚರಣೆ ಮೂಲಕ ಮಕ್ಕಳಿಗೆ ಉತ್ತಮ ವೇದಿಕೆಯನ್ನು ಒದಗಿಸಬೇಕು ಎಂದರು.
ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಉಪಾಧ್ಯಕ್ಷೆ ರೂಪಜನಾರ್ಧನ್ ಮಾತನಾಡಿ ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಸಂಬಂಧಪಟ್ಟಂತೆ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಅಭಿಮಾನ ಮೂಡಿಸುವ ಕೆಲಸವನ್ನು ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ. ಆಧುನಿಕ ಯುಗದಲ್ಲಿ ಚಲನಚಿತ್ರಗೀತೆಗಳಿಗೆ ಹೆಚ್ಚು ಆಕರ್ಷಿತರಾಗುವ ಬದಲು ಕನ್ನಡಕ್ಕೆ ಸಂಬಂಧಿಸಿದ ಗೀತೆಗಳು ಹಾಗೂ ಜಾನಪದ ಹಾಡುಗಳನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಲಲಿತಾಕೃಷ್ಣಮೂರ್ತಿ ಮಾತನಾಡುತ್ತ ಅನೇಕ ಸಾಹಿತಿ, ಕವಿ, ಬರಹಗಾರರನ್ನು ನೀಡಿದ ನೆಲ ಚಿತ್ರದುರ್ಗದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಜಿಲ್ಲೆಯಲ್ಲಿರುವ ಪ್ರತಿಭಾವಂತರನ್ನು ಗುರುತಿಸಲು ವೇದಿಕೆಗೆ ಹಣದ ಕೊರತೆಯಿರಬಹುದು. ಅದಕ್ಕಾಗಿ ಸರ್ಕಾರ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲೂಕು ಅಧಿಕಾರಿ ಉಮೇಶ್ ಮಾತನಾಡಿ ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ಅವಕಾಶದಿಂದ ವಂಚಿತವಾಗಬೇಕಾಗುತ್ತದೆ ಎಂಬುದನ್ನು ಗಮನಿಸಿ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಕನ್ನಡ ರಾಜ್ಯೋತ್ಸವ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಆನಂದಕುಮಾರ್, ಜಯದೇವಪ್ಪ, ಸ್ವಾಮಿ, ಸಕ್ಕರೆ ರಂಗಸ್ವಾಮಿ, ಕೆ.ಮಲ್ಲಿಕಾರ್ಜುನಾಚಾರ್ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.ಮಕ್ಕಳು ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟ ಗೀತೆಗಳನ್ನು ಹಾಡಿದರು. ಇನ್ನು ಕೆಲವು ಮಕ್ಕಳು ಭರತನಾಟ್ಯ, ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
