ಮಚ್ಚು ಲಾಂಗ್‍ಗಳಿಂದ ಕೊಚ್ಚಿ ಕೊಲೆ

ಬೆಂಗಳೂರು

      ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ, ಕೋಣನಕುಂಟೆಯ ವೀವರ್ಸ್ ಕಾಲೋನಿಯಲ್ಲಿ ಇಬ್ಬರು ರೌಡಿಗಳನ್ನು ಎದುರಾಳಿ ರೌಡಿ ಗ್ಯಾಂಗ್ ಅಟ್ಟಾಡಿಸಿ ಮಚ್ಚು ಲಾಂಗ್‍ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

     ವೀವರ್ಸ್ ಕಾಲೋನಿಯಲ್ಲಿ ಬುಧವಾರ ರಾತ್ರಿ 10.30ರ ವೇಳೆ ನಡೆದ ರೌಡಿಗಳ ಅಟ್ಟಹಾಸವನ್ನು ಭಯಭಿತರಾಗಿ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

      ಮದ್ಯಪಾನ ಮಾಡಿ ಮನೆಗೆ ಹೋಗುತ್ತಿದ್ದ ರೌಡಿಗಳಾದ  ಕಾಲೋನಿ ಮುರುಗ (34)ಹಾಗೂ ತಿಲಕ್‍ನಗರದ ಪಳನಿ (33) ನನ್ನು ಅಡ್ಡಗಟ್ಟಿ ಅಟ್ಟಾಡಿಸಿಕೊಂಡು ಹೋದ ರೌಡಿ ಬಿಟಿಎಸ್ ಮಂಜನ ಗ್ಯಾಂಗ್‍ನ 8 ಮಂದಿ ಮನಸೋ ಇಚ್ಛೆ ಮಚ್ಚು, ಲಾಂಗುಗಳಿಂದ ಹೊಡೆದು ಪರಾರಿಯಾಗಿದ್ದಾರೆ.

       ಗಂಭೀರವಾಗಿ ಗಾಯಗೊಂಡಿದ್ದ ಮುರುಗ ಹಾಗೂ ಪಳನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ರಕ್ತದ ಓಕುಳಿ ಹರಿದಿದ್ದು, ಸಿನಿಮಿಯ ರೀತಿಯಲ್ಲಿ ನಡೆದ ಕೃತ್ಯವನ್ನು ಕಂಡ ಸ್ಥಳೀಯರು ಭಯಭೀತರಾಗಿದ್ದಾರೆ.

ಹುಟ್ಟುಹಬ್ಬದ ದ್ವೇಷ

       ಕೊಲೆಗೈದ ಬಿಟಿಎಸ್ ಮಂಜ, ಮುರುಗ, ಪಳನಿ ರೌಡಿಶೀಟರ್‍ಗಳಾಗಿದ್ದು, ಹಲವಾರು ವರ್ಷಗಳಿಂದ ದ್ವೇಷವನ್ನಿಟ್ಟುಕೊಂಡಿದ್ದರು.ಇತ್ತೀಚೆಗೆ ಪಳನಿ ಮಗಳ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಪಳನಿ ಆತನ ಎಲ್ಲಾ ಸ್ನೇಹಿತರನ್ನ ಆಹ್ವಾನಿಸಿದ್ದನಾದರೂ ಬಿಟಿಎಸ್ ಮಂಜನನ್ನ ಕರೆದಿರಲಿಲ್ಲ.

      ತನ್ನ ಗ್ಯಾಂಗನ್ನು ಕರೆಯದಿದ್ದರಿಂದ ರೊಚ್ಚಿಗೆದ್ದ ಮಂಜ ಹಾಗೂ ಗ್ಯಾಂಗ್‍ನ 8 ಮಂದಿ ದುಷ್ಕರ್ಮಿಗಳು ಪಳನಿ ಹಾಗೂ ಮುರುಗನ್ ಮದ್ಯಪಾನ ಮಾಡಿ ಮನೆಗೆ ತೆರಳುತ್ತಿದ್ದ ವೇಳೆ ರಾತ್ರಿ 10.30ರ ವೇಳೆ ಆಟೋದಲ್ಲಿ ಬಂದು ಮಚ್ಚು-ಲಾಂಗ್‍ಗಳಿಂದ ದಾಳಿ ಮಾಡಿ ಸಾರ್ವಜನಿಕರ ಮುಂದೆಯೇ ಕೊಚ್ಚಿ ಕೊಲೆ ಮಾಡಿದ್ದಾರೆ.

     ಕೊಲೆಯಾದ ಪಳನಿ ಮತ್ತು ಮುರುಗನ್ ಹುಳಿಮಾವು ಹಾಗೂ ಅತ್ತಿಬೆಲೆ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ಮುರುಗ ಸೂರ್ಯಸಿಟಿ ಪೆಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದರೆ ಪಳನಿ ಕೂಡ ರೌಡಿಶೀಟರ್ ಆಗಿದ್ದಾನೆ.

ಮೂವರ ವಶ

     ಕೊಲೆ ನಡೆದ ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಅಣ್ಣಾಮಲೈ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಜ ಗ್ಯಾಂಗ್‍ನ ಮೂವರನ್ನ ವಶಕ್ಕೆ ಪಡೆದು ಮಂಜನಿಗಾಗಿ ಪೆಲೀಸರು ಶೋಧ ಮುಂದುವರೆಸಿದ್ದಾರೆ.

     ಕೊಲೆಯಿಂದ  ಕಾಲೋನಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಬಿಗಿ ಪೆಲೀಸ್ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿದೆ.ಕೊಲೆ ಕೃತ್ಯ ನಡೆಸಿದ ಗ್ಯಾಂಗ್‍ನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ಅಣ್ಣಾಮಲೈ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link