ಸಮಸ್ಯೆ ಬಗೆಹರಿಸುವ ತೃಪ್ತಿಕರ ವರದಿ ನೀಡಿ; ದತ್ತಾ

ಬಳ್ಳಾರಿ

     ಮಾನವ ಹಕ್ಕುಗಳ ಆಯೋಗಕ್ಕೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ವಿಷಯದಲ್ಲಿ ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡುವ ವರದಿಗಳನ್ನು ಪರಿಶೀಲಿಸದೇ ಫಾರ್ವರ್ಡ್ ಮಾಡುವುದನ್ನು ಮೊದಲು ಬಿಡಿ; ಆ ಪ್ರಕರಣಕ್ಕೆ ಸಂಬಂಧಿಸಿದ ಸಮಸ್ಯೆ ಅರಿತು ಅದು ವಿಲೇವಾರಿಯನ್ನಾಗಿಸುವ ನಿಟ್ಟಿನಲ್ಲಿ ಆತ್ಮತೃಪ್ತಿಕರವಾದಂತ ವರದಿಯನ್ನು ಮಾನವ ಹಕ್ಕುಗಳ ಆಯೋಗಕ್ಕೆ ನೀಡಿ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಆರ್.ಕೆ.ದತ್ತಾ ಅಧಿಕಾರಿಗಳಿಗೆ ಸೂಚಿಸಿದರು.

       ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿನ ಬಾಕಿ ಇರುವ ಪ್ರಕರಣಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ಮತ್ತು ಸಾರ್ವಜನಿಕರಿಂದ ದೂರುಗಳು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.

        ಬಹುತೇಕ ಪ್ರಕರಣಗಳ ವರದಿಯನ್ನು ಮೇಲಧಿಕಾರಿಗಳು ಪರಿಶೀಲಿಸುವ ಗೋಜಿಗೆ ಹೋಗದೇ ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡಿದ್ದನ್ನು ಆಯೋಗಕ್ಕೆ ಕಳುಹಿಸಿ ಕೈತೊಳೆದುಕೊಳ್ಳುವ ಕೆಲಸ ಹೆಚ್ಚಾಗಿ ಕಂಡುಬರುತ್ತಿದ್ದು,ಇದು ಸರಿಯಾದ ನಡೆಯಲ್ಲ ಮತ್ತು ಪ್ರಕರಣಗಳು ಬಗೆಹರಿಸುವ ವಿಷಯದಲ್ಲಿ ತೋರುವ ವರ್ತನೆಯೂ ಇದಲ್ಲ ಎಂಬುದನ್ನು ತಮ್ಮ ಮಾತುಗಳಲ್ಲಿ ಆಯೋಗದ ಸದಸ್ಯ ದತ್ತಾ ಅವರು ಸ್ಪಷ್ಟಪಡಿಸಿದರು.

         ವೈದ್ಯಕೀಯ ಸೌಲಭ್ಯ ಸಿಗದೇ ಹೊಳಲು ಆಸ್ಪತ್ರೆ ವ್ಯಾಪ್ತಿಯಲ್ಲಿ 3 ತಿಂಗಳ ಮಗು ಸಾವನ್ನಪ್ಪಿರುವುದಕ್ಕೆ ಸಂಬಂಧಿಸಿದಂತೆ ಕಾರಣವೆನು ಎಂಬುದನ್ನು ಡಿಎಚ್‍ಒ ಡಾ.ಶಿವರಾಜ ಹೆಡೆ ಅವರಿಂದ ತಿಳಿದುಕೊಂಡ ಸದಸ್ಯ ದತ್ತಾ ಅವರು ಜಿಲ್ಲೆಯಲ್ಲಿ ವೈದ್ಯರ ಸ್ಥಿತಿ ಮತ್ತು ವೈದ್ಯಕೀಯ ಸೇವೆ ಹಾಗೂ ಖಾಲಿ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿದರು.

          ಕಳೆದ ಒಂದು ವರ್ಷದ ಹಿಂದೆ ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಮತ್ತು ಸ್ಟ್ರೇಚರ್ ಸಿಗದ ಕಾರಣ ತಾಯಿಯ ಶವವನ್ನು ಎತ್ತೊಯ್ದ ಮಗ ಎಂಬುದಕ್ಕೆ ಸಂಬಂಧಿಸಿದಂತೆ ಆಯೋಗ ಮುತುವರ್ಜಿ ವಹಿಸಿ ಪ್ರಕರಣ ದಾಖಲಿಸಿಕೊಂಡಿದ್ದು,ಅದರ ಸತ್ಯಾಸತ್ಯತೆ ತಿಳಿಸಿ ಎಂದು ಡಿಎಚ್‍ಒ ಅವರಿಗೆ ಸೂಚಿಸಿದರು.

           ಅದರ ಸಂಪೂರ್ಣ ವಿವರನ್ನು ಸದಸ್ಯ ಆರ್.ಕೆ.ದತ್ತಾ ಅವರಿಗೆ ವಿವರಿಸಿದರು. ತನಿಖಾ ತಂಡದ ವರದಿಯನ್ನು ನಮ್ಮ ಆಯೋಗಕ್ಕೆ ಕಳುಹಿಸಿಕೊಡುವಂತೆ ಅವರು ನಿರ್ದೇಶಿಸಿದರು.

          ಇಬ್ಬರಿಗೆ ಶೋಕಾಸ್ ನೋಟಿಸ್ ಜಾರಿ: ಹೈದರಾಬಾದ್‍ನಲ್ಲಿ ವರದಕ್ಷಿಣೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗಿದೆ. ಅದೇ ಕೇಸ್‍ನ್ನು ಕೌಲ್‍ಬಜಾರ್‍ನಲ್ಲಿಯೂ ದಾಖಲಿಸಿರುವುದೇತಕ್ಕೆ ?, ಆ ವ್ಯಕ್ತಿಯನ್ನು ಪೊಲೀಸ್‍ರು ಹೈದರಾಬಾದ್‍ನಿಂದ ಕರೆದುಕೊಂಡು ಬರುತ್ತಾರೆ ಅಂದರೇ ಅರೆಸ್ಟ್ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದ ಆಯೋಗದ ಸದಸ್ಯ ಆರ್.ಕೆ.ದತ್ತಾ ಅವರು, ಇದು ಸಂಪೂರ್ಣ ಸುಪ್ರೀಂಕೋರ್ಟ್ ನಿಯಮಾವಳಿಗಳ ಹಾಗೂ ಮಾನವ ಹಕ್ಕುಗಳ ಆಯೋಗದ ಸೆಕ್ಷನ್ 16ರ ಉಲ್ಲಂಘನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಕಾರಣಿಕರ್ತರಾದ ಕೌಲ್‍ಬಜಾರ್‍ನ ಪಿಐ ಶಫಿವುಲ್ಲಾ ಮತ್ತು ಪಿಎಸ್‍ಐ ಎಚ್.ಬಿ.ವಿಜಯಲಕ್ಷ್ಮೀ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ಅವರು ಸೂಚಿಸಿದರು. ಕೂಡಲೇ ಈ ಪ್ರಕರಕ್ಕೆ ಸಂಬಂಧಿಸಿದಂತೆ ಮಾಹಿತಿ ಪರಿಶೀಲಿಸಿ ಆಯೋಗಕ್ಕೆ ವರದಿ ಕಳುಹಿಸುವಂತೆ ಎಸ್ಪಿ ಅರುಣ ರಂಗರಾಜನ್ ಅವರಿಗೆ ತಿಳಿಸಿದರು.

          ನಮ್ಮ ಆಯೋಗಕ್ಕೆ ಅರ್ಜಿ ಸಲ್ಲಿಸಿದ ಕೂಡ್ಲಿಗಿ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಜಿದಾರರಿಗೆ ತಹಸೀಲ್ದಾರ್ ಆದೇಶ ಸೇರಿದಂತೆ ಎಲ್ಲ ಆದೇಶಗಳು ಇವೆ. ಆದರೇ ಆ ಜಮೀನ್ದುರಾನಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಏಕೆ ನಿರ್ಲಕ್ಷ್ಯವಹಿಸಲಾಗುತ್ತಿದೆ ಎಂದು ಪ್ರಶ್ನಿಸಿದ ದತ್ತಾ ಅವರು ಕೂಡ್ಲಿಗಿ ಸಿಪಿಐ ವರದಿ ನೀಡಿರುವುದನ್ನು ಪರಿಶೀಲಿಸಿ ಈ ರೀತಿ ಯಾಕೆ ವರದಿ ಕೊಡ್ತೀರಾ ಅಂತ ಕೇಳಿ ಎಂದು ಎಸ್ಪಿ ಅವರಿಗೆ ಹೇಳಿದರು.

          ಬಾಕಿ ಇರುವ ವಿವಿಧ ವಿಷಯಗಳ ಪ್ರಕರಣಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಕೆಲ ಸಾರ್ವಜನಿಕರು ಇದೇ ಸಂದರ್ಭದಲ್ಲಿ ಅಯೋಗದ ಸದಸ್ಯ ಆರ್.ಕೆ.ದತ್ತಾ ಅವರಿಗೆ ದೂರುಗಳನ್ನು ಸಲ್ಲಿಸಿದರು.

          ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಎಸ್ಪಿ ಅರುಣ ರಂಗರಾಜನ್, ಪ್ರೊ.ಬೆಷನರ್ ಐಎಎಸ್ ನಂದಿನಿ, ಸಹಾಯಕ ಆಯುಕ್ತರಾದ ಲೋಕೇಶ, ರಮೇಶ ಕೊನರೆಡ್ಡಿ ಸೇರಿದಂತೆ ತಹಸೀಲ್ದಾರರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link