ಚಿತ್ರದುರ್ಗ:
ಪ್ರತಿಯೊಬ್ಬರಿಗೂ ಆತ್ಮಸ್ಥೈರ್ಯದಿಂದ ಬದುಕುವ ಹಕ್ಕು ಸಿಕ್ಕಿದೆ ಎನ್ನುವುದಾದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್‍ರವರು ನೀಡಿರುವ ಸಂವಿಧಾನವೇ ಕಾರಣ ಎಂದು ಛಲವಾದಿ ಗುರುಪೀಠದ ಶ್ರೀಬಸವ ನಗೀದೇವಸ್ವಾಮೀಜಿ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಿಂದುಳಿದವ ವರ್ಗಗಳ ಇಲಾಖೆ, ವಕೀಲರ ಸಂಘದಿಂದ ರಂಗಯ್ಯನಬಾಗಿಲು ಸಮೀಪವಿರುವ ಕುರುಬರ ಹಾಸ್ಟೆಲ್‍ನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯ ಸಾನಿಧ್ಯ ವಹಿಸಿ ಮಾತನಾಡಿದರು.
2500 ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಕಠಿಣವಾದ ಪರಿಸ್ಥಿತಿಯಿತ್ತು. ದೇವರು, ಧರ್ಮದ ಹೆಸರಿನಲ್ಲಿ ಅನೇಕ ಮೂಢನಂಬಿಕೆ, ಕಂದಾಚಾರಗಳು ಈಗಲೂ ನಡೆಯುತ್ತಿವೆ. ದೇವದಾಸಿಯರಿಗೆ ಜನಿಸಿದ ಅದೆಷ್ಟೊ ಮಕ್ಕಳಿಗೆ ಇನ್ನು ಅಪ್ಪನ ಹೆಸರಿಲ್ಲ. ಈಗ ಭಾರತದಲ್ಲಿ ಬದುಕಲು ಎಲ್ಲರಿಗೂ ಸಮಾನವಾದ ಹಕ್ಕಿದೆ. ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಸಾಕಷ್ಟು ಹೋರಾಟ ನಡೆಸಿ ಹಿಂಸೆ, ಅವಮಾನಗಳನ್ನು ಅನುಭವಿಸಿದ್ದಾರೆ. ಎಲ್ಲರೂ ಕಾನೂನು ಅರಿವು ತಿಳಿದುಕೊಂಡರೆ ಸೇವೆ ಮಾಡಲು ಮತ್ತೊಬ್ಬರ ಕಷ್ಟದಲ್ಲಿ ನೆರವಾಗಬಹುದು. ಪ್ರಜೆಗಳಿಗೆ ಸಂವಿಧಾನವೇ ನಿಜವಾದ ಗ್ರಂಥ. ಕಾನೂನು ಪಾಲಿಸಿದರೆ ಶಾಂತಿ, ಸಮಾಧಾನ, ನೆಮ್ಮದಿಯಿಂದ ಇರಬಹುದು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ದಿಂಡಲಕೊಪ್ಪರವರು ಮಾತನಾಡುತ್ತ ಸಮಾನತೆ, ಸ್ವಾತಂತ್ರ, ಮೂಲಭೂತ ಹಕ್ಕು, ಕರ್ತವ್ಯ ಸಂವಿಧಾನದ ಮೂಲಮಂತ್ರವಾಗಿದೆ. ಸಂವಿಧಾನವೆಂದರೆ ಏನು. ಅದರ ಮಹತ್ವವೇನು ಎಂಬುದನ್ನು ವಿದ್ಯಾರ್ಥಿಗಳು ಮೊದಲು ತಿಳಿದುಕೊಂಡಿರಬೇಕು. ಪ್ರತಿಯೊಂದು ವಿಷಯದಲ್ಲಿಯೂ ಸಂವಿಧಾನ ದಾರಿದೀಪವಾಗಿದೆ. ಸಂವಿಧಾನದಡಿಯಲ್ಲಿಯೇ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಮೂಲಭೂತ ಹಕ್ಕು ಎಷ್ಟು ಮುಖ್ಯವೋ, ಕರ್ತವ್ಯವು ಅಷ್ಟೇ ಮುಖ್ಯ ಎಂಬುದನ್ನು ಎಲ್ಲರೂ ತಿಳಿದುಕೊಂಡು ತಮ್ಮ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಂಗದ ಒಂದು ಭಾಗ. ಕೆಲವೊಮ್ಮೆ ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಕಲಹವೇರ್ಪಟ್ಟಾಗ ಕಾನೂನು ಸೇವಾ ಪ್ರಾಧಿಕಾರ ಎರಡು ಕಡೆಯವರನ್ನು ಕರೆಸಿ ಮನವೊಲಿಸಿ ರಾಜಿ ಮೂಲಕ ಪರಿಹಾರ ಒದಗಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಅದೇ ನ್ಯಾಯಾಲಯಕ್ಕೆ ವ್ಯಾಜ್ಯ ಹೋದರೆ ಹತ್ತಾರು ವರ್ಷಗಳವರೆಗೆ ಕಾಯಬೇಕಾಗುತ್ತದೆ. ಅಲ್ಲಿಯವರೆಗೂ ಎಷ್ಟು ಹಣ ಶ್ರಮ ವ್ಯರ್ಥವಾಗುತ್ತದೆ ಎನ್ನುವುದನ್ನು ಎಲ್ಲರೂ ಮನಗಂಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಿಗುವ ನೆರವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾನೂನು ಅರಿವು ಮೂಡಿಸುವುದು ಪ್ರಾಧಿಕಾರದ ಕೆಲಸ. ಕಾನೂನು ಗೊತ್ತಿಲ್ಲವೆಂದು ತಪ್ಪು ಮಾಡಿದರೆ ಕ್ಷಮೆ ಇಲ್ಲ. ಅದಕ್ಕಾಗಿ ಕಾನೂನು ತಿಳಿದುಕೊಂಡರೆ ಮಾತ್ರ ಜೀವನದಲ್ಲಿ ಸಣ್ಣತಪ್ಪು ಮಾಡಲು ಹೆದರಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್ ಮಾತನಾಡಿ ಸಂವಿಧಾನವೆಂದರೆ ಎಲ್ಲಾ ಕಾನೂನಿಗಿಂತಲೂ ಮಿಗಿಲಾದುದು. ಡಾ.ಬಿ.ಆರ್.ಅಂಬೇಡ್ಕರ್ ಆಳವಾಗಿ ಅಧ್ಯಯನ ಮಾಡಿ ಸಂವಿಧಾನವನ್ನು ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನವನ್ನು ಯಾರು ತಿಳಿದುಕೊಳ್ಳುತ್ತಾರೋ ಅವರಿಗೆ ಮಾತ್ರ ಮೂಲಭೂತ ಹಕ್ಕು ಮತ್ತು ಕರ್ತವ್ಯ ಏನು ಎಂಬುದು ಗೊತ್ತಾಗುತ್ತದೆ. ಸಂವಿಧಾನ ಜಾತ್ಯಾತೀತವಾಗಿದ್ದು, ಎಲ್ಲರೂ ಸಮಾನರೆ. ಧರ್ಮ, ಜಾತಿ ಆಧಾರದ ಮೇಲೆ ಯಾರು ಮತ ಕೇಳುವಂತಿಲ್ಲ. ಹಾಗಾಗಿ ನಿಮ್ಮ ಮತವನ್ನು ಯೋಚಿಸಿ ಅರ್ಹರಿಗೆ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯುವ ವಕೀಲ ಪ್ರತಾಪ್‍ಜೋಗಿ ಮಾತನಾಡುತ್ತ ಸಂವಿಧಾನ ದೇಶದ ಶ್ರೇಷ್ಟ ಗ್ರಂಥ, ಮೂಲಭೂತ ಹಕ್ಕುಗಳನ್ನು ಹೇಗೆ ಎಲ್ಲರೂ ಕೇಳುತ್ತಾರೋ ಅದೇ ರೀತಿ ಮೂಲಭೂತ ಕರ್ತವ್ಯಗಳನ್ನು ಮರೆಯಬಾರದು ಆಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.
ನ್ಯಾಯಾಧೀಶರಾದ ದೀಪು, ನ್ಯಾಯವಾದಿ ದಿಲ್‍ಷಾದ್ ವೇದಿಕೆಯಲ್ಲಿದ್ದರು. ಹಿಂದುಳಿದ ವರ್ಗಗಳ ತಾಲೂಕು ವಿಸ್ತರಣಾಧಿಕಾರಿ ರುದ್ರಮುನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
