ಊರು ವಿಭಜಿಸುವ ರೈಲ್ವೆ ಮೇಲ್ಸೇತುವೆ

ದಾವಣಗೆರೆ:

           ಬಿರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ತಾಲೂಕಿನ ತೋಳಹುಣಸೆ ಗ್ರಾಮದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಊರು ವಿಭಜಿಸುವಂತಿದ್ದು, ತಕ್ಷಣವೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಕೋರಿ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

           ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಳಹುಣಸೆ ಗ್ರಾಮದ ಮಂಜಾ ನಾಯ್ಕ, ಬಿರೂರು-ಸಮ್ಮಸಗಿ ರಸ್ತೆಯಲ್ಲಿರುವ ತೋಳಹುಣಸೆ ಗ್ರಾಮದ ಲಂಬಾಣಿ ತಾಂಡದ ಬಳಿಯಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಅವೈಜ್ಞಾನಿಕವಾಗಿದ್ದು, ಇಡೀ ತಾಂಡವನ್ನೇ ವಿಭಜಿಸುವಂತೆ ತಡೆಗೋಡೆ ಕಟ್ಟುವ ಮೂಲಕ ಮೇಲ್ಸೇತುವೆ ನಿರ್ಮಿಸುತ್ತಿರುವ ಅಧಿಕಾರಿಗಳ ಕ್ರಮ ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 

        ಅಧಿಕಾರಿಗಳು ಹೀಗೆ ಗೋಡೆ ನಿರ್ಮಿಸುವ ಮೂಲಕ ಮೇಲ್ಸೇತುವೆ ನಿರ್ಮಿಸುತ್ತಿರುವುದರಿಂದ ಇತ್ತ ಕಡೆಯ ಜನರು ಅತ್ತ ಕಡೆ ಇರುವ ಸಂಬಂಧಿಕರ ಮನೆಗೆ ಹೋಗಬೇಕಾದರೆ, ಅಲ್ಲದೆ, ತಾಂಡದ ಮಧ್ಯೆಯಲ್ಲಿರುವ ಸೇವಾಲಾಲ್ ದೇವಸ್ಥಾನಕ್ಕೆ ಹೋಗಬೇಕಾದರೆ, ಸುಮಾರು ಒಂದೂವರೆಯಿಂದ ಎರಡು ಕಿ.ಮೀ. ಸುತ್ತಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲದೆ, ಮೇಲದಸೇತುವೆಯ ಮೇಲೆಯೇ ಬಸ್‍ಗಳು ಸಂಚರಿಸುವುದರಿಂದ ಇನ್ನೂ ಮುಂದೆ ಬಸ್ ಸೌಲಭ್ಯ ದೊರೆಯದಂತಾಗಲಿದೆ. ಹೀಗೆ ಮೇಲ್ಸೇತುವೆಯಿಂದ ಇಲ್ಲಿಯ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಆರೋಪಿಸಿದರು.

        ಮೇಲ್ಸೇತುವೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ತಡೆ ಗೋಡೆಯ ರೀತಿಯಲ್ಲಿ ಗೋಡೆ ನಿರ್ಮಿಸಿ, ಆರ್‍ಒಬಿ ನಿರ್ಮಿಸಲಿಕ್ಕೆ ನಮ್ಮ ವಿರೋಧವಿದ್ದು, ಇದರ ಬದಲು ತಾಂಡದ ಮಧ್ಯೆ ಇರುವ 80 ಮೀಟರ್ ರಸ್ತೆಯಲ್ಲಿ 20 ಮೀಟರ್‍ಗೆ ಒಂದರಂತೆ ಮೂರು ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಿಸಿದರೆ, ಅದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

         ಹಿಂದೆ ಹೀಗೆಯೇ ಅವೈಜ್ಞಾನಿಕವಾಗಿ ಮೇಲ್ಸೇತುವೆ ನಿರ್ಮಿಸುತ್ತಿದ್ದಾಗ, ಗ್ರಾಮಸ್ಥರು ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಸಕ ಪ್ರೊ.ಎನ್.ಲಿಂಗಣ್ಣ ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳನ್ನು ಕರೆದು, ಗ್ರಾಮಸ್ಥರ ಒತ್ತಾಸೆಯಂತೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ ಊರಿನ ಮಧ್ಯೆ ಇರುವ 80 ಮೀಟರ್ ರಸ್ತೆಯನ್ನು ಬಿಟ್ಟು, ಎರಡೂ ಕಡೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ, ಈಗ ಸಂಸದರು ಮತ್ತು ಶಾಸಕರು ಅಧಿವೇಶನಕ್ಕೆ ಹೋಗಿರುವ ಸಂದರ್ಭದಲ್ಲಿ ಅಧಿಕಾರಿಗಳು ನೂರಾರು ಜನ ಪೊಲೀಸರನ್ನು ಕರೆದು ತಂದು, ಪೊಲೀಸರ ಸರ್ಪಗಾವಲಿನಲ್ಲಿ ಕಾಮಗಾರಿ ಆರಂಭಿಸಿದ್ದಾರೆ.

           ಸುದ್ದಿಗೋಷ್ಠಿಯಲ್ಲಿ ತೋಳಹುಣಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನಮ್ಮ ಮಂಜುನಾಥ್‍ಗೌಡ್ರು, ಉಪಾಧ್ಯಕ್ಷೆ ನಿರ್ಮಲಾ ನಾಗೇಂದ್ರ ನಾಯ್ಕ, ಗ್ರಾಮಸ್ಥರಾದ ಜಾನು ಬಾಯಿ, ಲಕ್ಷ್ಮಣ ನಾಯ್ಕ, ಮಂಜುನಾಥ್‍ಗೌಡ್ರು, ಮಾನಕಿ ಬಾಯಿ, ಶಾಂತಿ ಬಾಯಿ, ಚಂದ್ರ ನಾಯ್ಕ, ಲೋಕೇಶ್ ನಾಯ್ಕ, ಹನುಮಂತ ನಾಯ್ಕ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link