ಚಿತ್ರದುರ್ಗ
ಚಿತ್ರದುರ್ಗ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಗೆ ಜಿಲ್ಲೆಯಲ್ಲಿ 36 ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಕಲ್ಪಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ರಹದಾರಿಗೆ ಅನುಮತಿ ನೀಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಾರಿ ಒಟ್ಟು 293 ವಿಷಯಗಳಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಯಿತು. ಸ್ವಯಂ ಪ್ರೇರಿತವಾಗಿ ತಮ್ಮ ರಹದಾರಿಯನ್ನು ರದ್ದುಗೊಳಿಸುವಂತೆ ಕೋರಿದ್ದ 11 ಅರ್ಜಿಗಳನ್ನು ಇತ್ಯರ್ಥಪಡಿಸಿದ ಜಿಲ್ಲಾಧಿಕಾರಿಗಳು, ಕೋರಿಕೆಗೆ ಅನುಗುಣವಾಗಿ ರಹದಾರಿಯನ್ನು ರದ್ದುಗೊಳಿಸಿದರು.
ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆ ಪರವಾಗಿ ತಮ್ಮ ವಿಷಯ ಮಂಡಿಸಿದ ಪ್ರತಿನಿಧಿಗಳು, ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಬಸ್ ಪಾಸ್, ಹಿರಿಯ ನಾಗರಿಕರಿಗೆ ರಿಯಾಯಿತಿ, ಸೀಟು ಕಾಯ್ದಿರಿಸುವಿಕೆ ಸೇರಿದಂತೆ ವಿವಿಧ ಸವಲತ್ತು ನೀಡುತ್ತಿದ್ದು, ಪ್ರಯಾಣಿಕ ಸ್ನೇಹಿ ಸಂಸ್ಥೆಯಾಗಿದೆ. ಹೀಗಾಗಿ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಗೆ ಹೊಸದಾಗಿ 36 ರಹದಾರಿಯನ್ನು ನೀಡುವಂತೆ ಮನವಿ ಸಲ್ಲಿಸಿದರು.
ಇದನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿಗಳು, ನೂತನ 36 ರಹದಾರಿಗೆ ಅನುಮತಿ ನೀಡಿದರು. ಅಲ್ಲದೆ 24 ಮಾರ್ಗಗಳ ರಹದಾರಿಯ ನವೀಕರಣಕ್ಕೆ ಹಾಗೂ 21 ತಾತ್ಕಾಲಿಕ ರಹದಾರಿಗೆ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸರ್ಕಾರದ ನಿರ್ದೇಶನದಂತೆ ದಿ: 14-01-2002 ದಿನಾಂಕಕ್ಕೂ ಮುನ್ನ ಪಡೆದಿರುವ ರಕ್ಷಿತ ರಹದಾರಿಗಳಿಗೆ ಸಂಬಂಧಿಸಿದಂತೆ ಖಾಸಗಿ ಬಸ್ಗಳ 40 ರಹದಾರಿಗಳನ್ನು ನವೀಕರಿಸಲು ಅನುಮತಿ ನೀಡಲಾಯಿತು. ಅಲ್ಲದೆ, ವಿವಿಧ ಕಾರಣಗಳಿಂದ ರಹದಾರಿ ವರ್ಗಾವಣೆ ಕೋರಿದ ಅರ್ಜಿಗಳ ಪೈಕಿ ಕಾನೂನಾತ್ಮಕವಾಗಿ ರಹದಾರಿಯನ್ನು ವರ್ಗಾವಣೆ ಮಾಡಲು ಅರ್ಹವಿರುವ 31 ಪ್ರಕರಣಗಳಿಗೆ ಒಪ್ಪಿಗೆ ಸೂಚಿಸಲಾಯಿತು.
14-01-2002 ದಿನಾಂಕಕ್ಕೂ ಮುನ್ನ ಪಡೆದಿರುವ ರಕ್ಷಿತ ರಹದಾರಿಗಳಿಗೆ ಅನ್ವಯಿಸಿದಂತೆ, ಕೆಲವರು ರಹದಾರಿಯಲ್ಲಿನ ಸಮಯ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಕುರಿತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಇಂತಹ ಪ್ರಸ್ತಾವನೆಗಳನ್ನು ಇತ್ಯರ್ಥಪಡಿಸುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿನ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ 2014 ರಲ್ಲಿ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಈಗಾಗಲೆ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ದೊರೆಯಬೇಕು. ಎಲ್ಲ ಗ್ರಾಮೀಣ ಪ್ರದೇಶಗಳಿಗೂ ಸಕಾಲದಲ್ಲಿ ಬಸ್ ಸಂಪರ್ಕ ವ್ಯವಸ್ಥೆ ಇರಬೇಕು. ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆರೋಗ್ಯಪೂರ್ಣ ಸ್ಪರ್ಧೆ ಇರಬೇಕೆಂದರೆ, ಖಾಸಗಿಯವರಿಗೂ ಅವಕಾಶ ದೊರೆಯಬೇಕು ಎಂಬುದಾಗಿ ಬಸ್ ಮಾಲೀಕರ ಸಂಘದ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ಕುರಿತಂತೆ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆಲ ಖಾಸಗಿ ಬಸ್ ಮಾಲೀಕರು ಅಭಿಪ್ರಾಯಪಟ್ಟರು.ಸಭೆಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್ ಸೇರಿದಂತೆ ವಿವಿಧ ಅಧಿಕಾರಿಗಳು, ಬಸ್ ಮಾಲೀಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ