ಹರಿಹರ:
ಉತ್ತಮವಾದ ಶಿಕ್ಷಣಪಡೆಯುವದರ ಮೂಲಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರಂತೆ ದೇಶಕ್ಕೆ ಹೆಸರು ತನ್ನಿ ಎಂದು ವಿದ್ಯಾರ್ಥಿಗಳಿಗೆ ಶಾಸಕ ಎಸ್ ರಾಮಪ್ಪ ಕರೆ ನೀಡಿದರು.
ನಗರದ ಗಾಂಧಿ ಮೈದಾನದ ಆವರಣದಲ್ಲಿ ರಾಷ್ಟ್ರೀಯ ಮತ್ತು ನಾಡ ಹಬ್ಬ ಆಚರಣಾ ಸಮಿತಿಯಿಂದ 70ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ನಿಮ್ಮ ಜ್ಞಾನವನ್ನು ಅರ್ಪಿಸಬೇಕು. ಮತ್ತು ರಾಷ್ಟ್ರದ ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ನೀವು ನಿಲ್ಲುವಂತಾಗಬೇಕು ಎಂದು ಹೇಳಿದರು.
ಇಂದು ನಾವು ಆಚರಿಸುವ ಗಣರಾಜ್ಯೋತ್ಸವವನ್ನು ನಮಗೆ 47 ರ ಸ್ವಾತಂತ್ರ್ಯದ ನಂತರ 1950 ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶ್ರಮದ ಫಲವಾಗಿ ದೇಶದಲ್ಲಿ ನಾವು ಸ್ವತಂತ್ರವಾಗಿ ಜೀವಿಸಲು ಅನುವ ಮಾಡಿಕೊಟ್ಟಿದ್ದಾರೆ ಎಂದರು.
ಅಂದು ಅವರು ರಚಿಸಿದ ಸಂವಿಧಾನದಲ್ಲಿ ದೇಶದ ಎಲ್ಲ ರಾಜ್ಯಗಳ ಭಾಷಾವಾರು ವಿಂಗಡಣೆ, ಆಯಾ ಧರ್ಮಗಳ ಅಡಿಯಲ್ಲಿ ಎಲ್ಲರಿಗೂ ಸಮಬಾಳು-ಸಮಪಾಲು ಎನ್ನುವ ಆಶಯದೊಂದಿಗೆ ರಚಿಸಲಾದ ಸಂವಿಧಾನವು ಇಂದು ವಿಶ್ವದಲ್ಲೇ ಅತ್ಯುನ್ನತ ಸಂವಿಧಾನ ಎಂದು ಹೇಳುವಂತೆ ರಚಿಸಲಾಗಿದೆ ಮತ್ತು ದೇಶದ ಪ್ರತಿಯೊಬ್ಬರಿಗೂ ತೃಪ್ತಿಯಾಗುವಂತೆ ಕೊಡುಗೆಯನ್ನು ದೇಶಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಹರಿಹರ ಕ್ಷೇತ್ರದಾದ್ಯಂತ 15-16 ಕೆರೆಗಳಿದ್ದುಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ, ಮುಖ್ಯವಾಗಿ ಭೈರನಪಾದ ಏತ ನೀರಾವರಿ ಯೋಜನೆಗೆ ಆದ್ಯತೆ ನೀಡಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಜಾಗ್ರತೆ ವಹಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ 99 ಕೊಠಡಿಗಳ ಕಟ್ಟಡಕ್ಕೆ ಮಂಜೂರು ದೊರೆತಿದ್ದು ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಕಾರ್ಯಕ್ರಮದಲ್ಲಿರುವ ಶಿಕ್ಷಕರುಗಳು ತಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗೆ ಅವಶ್ಯವಿರುವ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಧ್ವಜಾರೋಹಣ ನಡೆಸಿ ಧ್ವಜ ಸಂದೇಶ ನೀಡಿದ ತಹಸೀಲ್ದಾರ್ ರೆಹಾನ್ ಪಾಷಾ ಮಾತನಾಡುತ್ತಾ 1950 ರಲ್ಲಿ ಜಾರಿಗೆ ಬಂದ ಸಂವಿಧಾನದಿಂದ ಪ್ರಜೆಯೇ ಪ್ರಭು ಎಂದು ದೇಶದ ಪ್ರತಿಯೊಬ್ಬರೂ ಸಂವಿಧಾನಾತ್ಮಕ ಅಧಿಕಾರ ದೊರೆಯಿತು. ಆದ್ದರಿಂದ ದೇಶದ ಪ್ರಜೆಗಳಾದ ನಾವುಗಳೆಲ್ಲರೂ 1950 ರಲ್ಲಿ ಜಾರಿಗೆ ಬಂದ ಗಣರಾಜ್ಯೋತ್ಸವವನ್ನು ಸಂತೋಷ ಹಾಗೂ ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರೇಡ್2 ತಹಸೀಲ್ದಾರ್ ಆರ್.ವೆಂಕಟಮ್ಮ, ಲೋಕೋಪಯೋಗಿ ಅಭಿಯಂತರಾದ ಈಶ್ವರಪ್ಪ,ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೆ.ನೀಲಗಿರಿಯಪ್ಪ, ಗ್ರಾಮಾಂತರ ಪೊಲೀಸ್ ಠಾಣೆ ಯಾಸಿನ್ ಉಲ್ಲಾ, ಪೌರಕಾರ್ಮಿಕ ರಾಮಪ್ಪ, ಪತ್ರಕರ್ತರಾದ ಸುರೇಶ್ ಕುಣೆಬೆಳೆಕೆರೆ, ಮಂಜುನಾಥ ಪೂಜಾರ್,ಯೋಗ ಪಟುಗಳಾದ ಸ್ವಪ್ನ, ನಮಿತಾಪ್ರಭು, ಕ್ರೀಡಾಪಟುಗಳಾದ ಧನರಾಜ್ ಮತ್ತು ಮಹಮ್ಮದ್ ರಫೀಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಜಾತಾ ಡಿ, ತಾ.ಪಂ.ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ, ನಗರಸಭಾ ಸದಸ್ಯರಾದ ಬಿ.ರೇವಣಸಿದ್ದಪ್ಪ,ಎಜಾಜ್ ಅಹ್ಮದ್, ಪೌರಾಯುಕ್ತೆ ಎಸ್ ಲಕ್ಷ್ಮಿ, ಸಿ.ಪಿ.ಐ. ಈರಪ್ಪ ಎಸ್ ಗುರುನಾಥ್, ಶಿಕ್ಷಣಾಧಿಕಾರಿ ಯು ಬಸವರಾಜಪ್ಪ,ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ,ಸಿಡಿಪಿಒ ರಾಮಲಿಂಗಪ್ಪ, ಸಿಬ್ಬಂದಿಗಳಾದ ಭಾರತಿ ಸಿದ್ಧಾರೂಡ, ಲಿಂಗರಾಜ್, ಸುವರ್ಣಮ್ಮ, ನರಸಮ್ಮ, ರೆವಣಿ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








