ಹೊಸಪೇಟೆ :
ಜಿಲ್ಲೆಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಡಾ.ಸರೋಜಿನಿ ಮಹಿಷಿ ವರದಿಯಂತೆ ಶೇ.85%ರಷ್ಟು ಉದ್ಯೋಗ ಕಲ್ಪಿಸಿ ಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದ ರೋಟರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ‘ಬೇಕೇ ಬೇಕು ನ್ಯಾಯ ಬೇಕು’ ಸ್ಥಳೀಯರಿಗೆ ಉದ್ಯೋಗ ನೀಡಲೇಬೇಕು ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಜಿಲ್ಲೆಯ ಪ್ರತಿಷ್ಟಿತ ಕಾರ್ಖಾನೆಗಳಾದ ಜಿಂದಾಲ್, ಬಿಎಂಎಂ, ಎಸ್‍ಎಲ್‍ಆರ್, ಸ್ಮೈಯೋರ್ ಕಾರ್ಖಾನೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಪ್ರಕಾರ ಶೇ.85ರಷ್ಟು ಉದ್ಯೋಗ ನೀಡಲೇಬೇಕು.
ಪ್ರತಿ ವರ್ಷ ಜಿಲ್ಲೆಯಲ್ಲಿ 4 ಸಾವಿರದಿಂದ 5 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಹೀಗಾಗಿ ಕಾರ್ಖಾನೆಯವರು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡ ಗುಜ್ಜಲ ನಾಗರಾಜ ಮಾತನಾಡಿ, ಕಾರ್ಖಾನೆಯವರು ಸ್ಥಳೀಯರಿಗೆ ಉದ್ಯೋಗ ನೀಡದೇ, ಅನ್ಯ ರಾಜ್ಯದವರಿಗೆ ನೀಡುತ್ತಿದ್ದಾರೆ. ನಮ್ಮ ನೀರು, ವಿದ್ಯುತ್, ಭೂಮಿ ಪಡೆದು ನಮ್ಮವರಿಗೆ ಕೆಲಸ ನೀಡದೇ ಮೋಸ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇಬೇಕಾಗಿದೆ. ಹೀಗಾಗಿ ಡಾ.ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಎಲ್ಲಾ ಕಾರ್ಖಾನೆಗಳ ಸಿ.ಇ.ಒ.ಗಳ ಸಭೆ ಕರೆಯಬೇಕು. ಜಿಲ್ಲೆಯ ವಿದ್ಯಾರ್ಥಿಗಳ ವಿದ್ಯಾಬ್ಯಾಸ ಮುಗಿದ ನಂತರ ಅದೇ ವರ್ಷ ಕ್ಯಾಂಪಸ್ ಸಂದರ್ಶನದ ಮೂಲಕ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ಸಹಾಯಕ ಆಯುಕ್ತರ ಪರವಾಗಿ ಅಧಿಕಾರಿ ಅಮರಪ್ರಸಾದ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ನಗರ ಘಟಕ ಅಧ್ಯಕ್ಷ ಎಸ್.ಎಂ.ಜಾಫರ್, ಕಾರ್ಯದರ್ಶಿ ಶ್ರೀನಿವಾಸ, ಆಟೋ ಹುಲುಗಪ್ಪ, ಜೆ.ಮಂಜುನಾಥ, ವಿರುಪಾಕ್ಷಿ, ಜೆ.ರುದ್ರಪ್ಪ, ಸೈಯದ್ ಜಮೀರ್ ಸೇರಿದಂತೆ ಇನ್ನಿತರರು ಇದ್ದರು.