ಬಳ್ಳಾರಿ
ಮಾ.19ರಂದು ನಡೆಯುವ ನಗರ ದೇವತೆ ಶ್ರೀಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವವನ್ನು ಸಂಪ್ರದಾಯದಂತೆ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಇದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮುಜರಾಯಿ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದಿನ ಕಾಲದಿಂದ ಬಂದಂತಹ ಸಿಡಿಬಂಡಿ ರಥೋತ್ಸವದ ಸಾಂಪ್ರದಾಯಕ ಪದ್ಧತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ, ಸಿಡಿಬಂಡಿಯ ರಥೋತ್ಸವದ ಪರೆಂಪರೆಯನ್ನು ಮುಂದುವರಿಸಿಕೊಂಡು ಹೋಗೋಣ, ಇದರ ಇತಿಹಾಸವನ್ನು ಇಂದಿನ ಯುವಕರಿಗೆ ತಿಳಿಸುವಂತಹ ಪ್ರಯತ್ನ ಮಾಡಬೇಕು ಎಂದರು.
ಸಿಡಿಬಂಡಿ ರಥೋತ್ಸವ ಹಿನ್ನಲೆಯಲ್ಲಿ ಸುಮಾರು 1 ರಿಂದ 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧಿಸಿದಂತೆ ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಛತೆಗೆ ಅನುಸರಿಸಬೇಕಾದ ಕ್ರಮ ಹಾಗೂ ಕುಡಿಯುವ ನೀರಿನ ಪೂರೈಕೆ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡಬೇಕು. ಮಹಿಳೆಯರ ರಕ್ಷಣೆ ಹಿತದೃಷ್ಟಿಯಿಂದ ಅವರಿಗೆ ನಿಲ್ಲಲು ಪ್ರತ್ಯೇಕ ಸ್ಥಳವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್, ಅ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳ ವ್ಯವಸ್ಥೆ ಮಾಡಲಾಗುತ್ತದೆ. ರಥೋತ್ಸವ ನೆಡೆಯುವ ಸಂದರ್ಭದಲ್ಲಿ ರೈಲ್ವೆ ಹಳಿಗಳ ಮೇಲೆ ಜನರು ಬರುವುದು ನಮ್ಮ ಗಮನಕ್ಕೆ ಬಂದಿದ್ದು, ರೈಲ್ವೇ ಅಧಿಕಾರಿಗಳ ಜತೆ ಮಾತನಾಡಿ ಅರ್ಧ ಗಂಟೆ ರೈಲ್ವೇ ಸಂಚಾರವನ್ನು ನಿಲ್ಲಿಸಲು ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಪಿ.ಬಿ.ಮಹೇಶ್, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಶಿವರಾಜ್ ಹೆಡೆ ಹಾಗೂ ದೇವಸ್ಥಾನದ ಧರ್ಮಕರ್ತರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.