ಬೆಂಗಳೂರು
ಸಮಾಜದ ದುರ್ಬಲರು, ದಲಿತರು, ಹಿಂದುಳಿದ ವರ್ಗದವರಿಗೆ ಆರ್ಥಿಕಶಕ್ತಿ ತುಂಬಿ ಸಮಾನತೆ ಪ್ರತಿಪಾದಿಸಿದ ಸಮಾಜವಾದಿ ನಾಯಕ ರಾಮ ಮನೋಹರ್ ಲೋಹಿಯಾಯವರ ಚಿಂತನೆ ಸಿದ್ಧಾಂತಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುಷ್ಠಾನಕ್ಕೆ ತಂದ ಹಲವು ಜನಪ್ರಿಯ ಕಾರ್ಯಕ್ರಮಗಳ ಹಿಂದಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಶನಿವಾರ ಲೋಹಿಯಾ ಕುರಿತ ಭಾಷಣ, ಬರಹಗಳ ಸಂಗ್ರಹ ಇಂದಿಗೂ ಬೇಕಾದ ಲೋಹಿಯಾ ಪುಸ್ತಕವನ್ನು ಬಿಡುಗಡೆ ಮಾಡಿ, ಮಾತನಾಡಿದ ಅವರು ಲೋಹಿಯಾ ಅವರ ಚಿಂತನೆಗಳು ಇಂದಿನ ಸರ್ಕಾರದ ಆಡಳಿತಕ್ಕೂ ಪೂರ್ವಕವಾಗಿದೆ ಎಂದು ಹೇಳಿದರು.
ಸಮಾಜದ ದುರ್ಬಲರು, ದಲಿತರು, ಹಿಂದುಳಿದ ವರ್ಗದವರಿಗೆ ಆರ್ಥಿಕಶಕ್ತಿ ತುಂಬಬೇಕು. ಆರ್ಥಿಕ ಸಮಾನತೆ ಇಲ್ಲದೆ ಈ ವರ್ಗದ ಏಳಿಗೆ ಸಾಧ್ಯವಿಲ್ಲ ಎಂದು ನಂಬಿದ್ದರು. ಜಾತಿವಿನಾಶ ಆಗದೆ, ಸಮಾಜದಲ್ಲಿ ಬದಲಾವಣೆ ಕಾಣುವುದು ಸಾಧ್ಯವಿಲ್ಲ. ಜಾತಿ ಚಲನೆಯಿಲ್ಲದ ವ್ಯವಸ್ಥೆಯಾಗಿದೆ ಎಂದು ಹೇಳುತ್ತಿದ್ದ ಲೋಹಿಯಾ ಅವರು ಜಾತಿ, ವರ್ಗ, ಲಿಂಗತಾರತಮ್ಯ ಹಾಗೂ ದೇಶದ ರೈತರ ಸಮಸ್ಯೆಗಳ ಬಗ್ಗೆ ದೊಡ್ಡ ಅಧ್ಯಯನವನ್ನೇ ನಡೆಸಿದ್ದರು.ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದ ಅಧಿಕಾರ ವಿಕೇಂದ್ರಿಕರಣ ಅಲ್ಲದೆ ಮೀಸಲಾತಿ ವ್ಯವಸ್ಥೆ ಕೂಡ ಲೋಹಿಯಾ ಚಿಂತನೆಗಳಿಂದಲೇ ಬಂದಿದ್ದು ಎಂದು ಹೇಳಿದರು.
ಬಾವಿಒಳಗೆ ನೀರು ಸೇದಲು ಹೋದಾಗ ನೀರಿನಲ್ಲಿದ್ದ ಕಸವನ್ನು ಸರಿಸಲು ಬಿಂದಿಗೆಯನ್ನು ಅತ್ತಿತ್ತ ಆಡಿಸಬೇಕು. ನಂತರ ನೀರು ಸ್ವಚ್ಛವಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಮತ್ತೇ ನೀರು ಕಸಗಳಿಂದ ಆವೃತ್ತವಾಗುತ್ತದೆ. ಹಾಗಾಗಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವುದು ಅಷ್ಟೊಂದು ಸುಲಭವಲ್ಲ ಎಂದು ಅಭಿಪ್ರಾಯ ಪಟ್ಟರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಲೋಹಿಯಾ ಅವರು ಅಹಿಂಸಾ ತತ್ವಗಳ ಮೇಲೆ ಹೋರಾಟ ನಡೆಸಬೇಕೆಂದು ಬಲವಾಗಿ ನಂಬಿದ್ದರು. ಅವರ ಹಾದಿಯಲ್ಲಿ ಸಾಗಬಂದ ನಾನು ಕೂಡ ಅಹಿಂಸಾ ತತ್ವದ ನೆನೆಗತ್ತಿನಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಸಮಾಜದಲ್ಲಿ ಜಾತಿಯ ವಿಷ ಬೀಜ ಬೇರೂರಿದೆ. ಅದು ಸಮಾಜದಿಂದ ತೊಲಗಬೇಕಾದರೆ ಸಾಮಾನ್ಯ ಶಕ್ತಿಯಿಂದ ಸಾಧ್ಯವಿಲ್ಲ ಎಂದು ಪದೇ ಪದೇ ನೋವಿನಿಂದಲೇ ಹೇಳುತ್ತಿದ್ದರು ಎಂದು ತಿಳಿಸಿದರು.ಸಮಾಜದಲ್ಲಿ ಏನಾದರೂ ಒಳ್ಳೆಯದು ಮಾಡಬೇಕು. ಹಿಂದುಳಿದವರು ದಲಿತ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ನಡೆಸುವ ಹೋರಾಟಗಳು
ಎಸಿ ಮತ್ತು ಬಿಸಿ ಅಧಿಕಾರಿಗಳಿಗೆ ಗೊತ್ತಾಗುವುದಿಲ್ಲ. ಸುಲಭವಾಗಿ ಬಗೆಹರಿಸಬೇಕಾದ ಸಮಸ್ಯೆಗಳ ಕಡಿತವನ್ನು ವರ್ಷಾನುಗಟ್ಟಲೆ ಹಾಗೆ ಇಟ್ಟುಕೊಂಡು ಬಿಡುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಅಷ್ಟಕ್ಕೂ ಸುಮ್ಮನಾಗದ ಕಾಗೋಡು ತಿಮ್ಮಪ್ಪ ಅವರು ಮೀಸಲಾತಿಯ ಲಾಭಪಡೆದ ಎಸ್ಸಿ,ಎಸ್ಟಿ ವರ್ಗದ ಅಧಿಕಾರಿಗಳು ಕೂಡ ತಮ್ಮ ಹುಟ್ಟಿದ ಊರಿನ ಕಡೆ ಮುಖ ಹಾಕಿ ಮಲಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ನ್ಯಾಯವಾದಿ . ರವಿವರ್ಮ ಕುಮಾರ್, ಚಿಂತಕ ಶೆಟ್ಟರ್ ರಾಜ ಹುಳಿಯಾರ್, ನೆಲಸಿರಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಬಸವರಾಜು, ಸಮತಾ ವಿದ್ಯಾಲಯ ಅಧ್ಯಕ್ಷ ಕೆ. ದೊರೈರಾಜು, ಮತ್ತು ಇಂದಿಗೂ ಬೇಕಾದ ಲೋಹಿಯಾ ಪುಸ್ತಕದ ಸಂಪಾದಕರಾದ ಹೆಚ್. ವಿ. ಮಂಜುನಾಥ್ ಮತ್ತು ನಬಿಲ್ ಅವರು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








