ಲಕ್ನೋ

ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ ಉತ್ತರ ಪ್ರದೇಶದಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು. ಮೊದಲ ಹಂತದಲ್ಲಿ ಪಶ್ಚಿಮ ಉತ್ತರ ಪ್ರದೇಶದ 8 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ನಿನ್ನೆ ಮಧ್ಯಾಹ್ನ ಮೂರು ಗಂಟೆಯವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದರು.ಎರಡನೇ ಹಂತದ ಚುನಾವಣೆಗೂ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.
ಶಹರಾನ್ಪುರ, ಕೈರಾನ, ಬಿಜ್ನೂರ್, ಮೀರತ್, ಮುಜಫ್ಫರ್ನಗರ, ಬಾಗ್ಪಟ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರ ರ್ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮೂವರು ಕೇಂದ್ರ ಸಚಿವರು ಮೊದಲ ಹಂತದ ಚುನಾವಣೆಯಲ್ಲಿ ತಮ್ಮ ಹಣೆಬರಹ ಪರೀಕ್ಷಿಸಿಕೊಳ್ಳಲಿದ್ದಾರೆ. ಕೇಂದ್ರ ಸಚಿವರಾದ ಜನರಲ್(ನಿವೃತ್ತ) ವಿ.ಕೆ.ಸಿಂಗ್ ಅವರು ಗಾಜಿಯಾಬಾದ್, ಡಾ.ಮಹೇಶ್ ಶರ್ಮಾ ಅವರು ಗೌತತ್ ಬುದ್ಧ್ ನಗರ್, ಸತ್ಪಾಲ್ ಸಿಂಗ್ ಅವರು ಬಾಗ್ ಪಟ್ ಕ್ಷೇತ್ರಗಳಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಮುಜಫ್ಫರ್ನಗರದಿಂದ ರಾಷ್ಟ್ರೀಯ ಲೋಕದಳ ಅಧ್ಯಕ್ಷ ಅಜಿತ್ ಸಿಂಗ್, ಅವರ ಪುತ್ರ ಜಯಂತ್ ಚೌಧರಿ ಅವರು ಬಾಗ್ಪಟ್ನಿಂದ ಕಣಕ್ಕಿಳಿದಿದ್ದು, ಇಲ್ಲಿ ಬಿಜೆಪಿ ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿ ಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಆದರೆ ಕಾಂಗ್ರೆಸ್ ಇಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
ಬಾಲಿವುಡ್ ತಾರೆ ಹೇಮಾ ಮಾಲಿನಿ ಅವರು ಮಥುರಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ.
ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಆಗ್ರಾದ ಫತೇಪುರ್ ಸಿಕ್ರಿ ಕ್ಷೇತ್ರದಿಂದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ನಾಮಪತ್ರ ಸಲ್ಲಿಸಲಿದ್ದಾರೆ. ರಾಜ್ಯದ 80 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಏಪ್ರಿಲ್11ರಿಂದ ಮೇ 19ರವರೆಗೆ ಚುನಾವಣೆ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.
ಮೊದಲ ಹಂತದ ಚುನಾವಣೆಗೆ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನಾಳೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮಾರ್ಚ್ 28 ಕೊನೆಯ ದಿನವಾಗಿದೆ
ಮೊದಲ ಹಂತಕ್ಕೆ ಇದುವರೆಗೆ 23 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ 82.24 ಲಕ್ಷ ಪುರುಷರು, 68.39 ಲಕ್ಷ ಮಹಿಳೆಯರು, 1,014 ತೃತೀಯ ಲಿಂಗಿಗಳು ಸೇರಿ ಒಟ್ಟು 1.50 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 16,581 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ಶೇಕಡಾ 15ರಷ್ಟು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








