ರಾಜ್ಯವನ್ನ ಅಧೋಗತಿಗೆ ತಳ್ಳಿರುವ ಜೆ.ಸಿ.ಬಿ ಪಕ್ಷಗಳಿಗೆ ಪಾಠಕಲಿಸಲು ಹೊಸ ಪಕ್ಷ ಸ್ಥಾಪನೆ :ರವಿಕೃಷ್ಣಾರೆಡ್ಡಿ

ಕುಣಿಗಲ್

      ರಾಜ್ಯದಲ್ಲಿರುವ ಜೆ.ಸಿ.ಬಿ ಎಂಬ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂರು ಪಕ್ಷಗಳು ರಾಜಕೀಯ ಸಾಮಾಜಿಕ ಪರಿಸ್ಥಿತಿಯನ್ನು ಅಧೋಗತಿಗೆ ತಂದಿದ್ದು ಅಕ್ರಮ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜೆಸಿಬಿ ಪಕ್ಷವನ್ನ ಕಿತ್ತೊಗೆಯಲು ಸಮಾನ ಮನಸ್ಕರು ಕೂಡಿ ಕರ್ನಾಟಕ ರಾಷ್ಟ್ರಸಮಿತಿ ಎಂಬ ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದು ಸ್ವಚ್ಛ ಪ್ರಾಮಾಣಿಕ ಜನಪರ ಹಾಗೂ ಸಂವಿಧಾನ ಬದ್ದ ಚುನಾವಣೆಯ ಮೂಲಕ ಗೆದ್ದು ಉತ್ತಮ ಜನಪರ ಆಡಳಿತ ನೀಡುವುದೆ ನಮ್ಮ ಧ್ಯೇಯವಾಗಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದರು.

       ಅವರು ಪಟ್ಟಣದಲ್ಲಿರುವ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಶಕಗಳು ಕಳೆದರೂ ಸಮಸ್ಯೆಗಳು ಪೆಡಂಭೂತಗಳಾಗಿವೆ. ಕೃಷಿ ಕ್ಷೇತ್ರದಲ್ಲಿ ನಿರಂತರ ಸಮಸ್ಯೆಗಳಿದ್ದರೆ ನಗರಗಳು ತಮ್ಮದೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿವೆ. ರಾಜ್ಯದ ಬಹುಭಾಗ ನಿರಂತರ ಬರಗಾಲಕ್ಕೆ ತುತ್ತಾಗುತ್ತಿದ್ದರೂ ಜನನಾಯಕರೆನಿಸಿಕೊಂಡಿರುವ ರಾಜಕಾರಣಿಗಳು ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ವಿಪರ್ಯಾಸ.

       ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸರ್ಕಾರಗಳ ಪಾತ್ರ ಕುಸಿಯುತ್ತಿದ್ದು ಜನಸಾಮಾನ್ಯರ ಜೀವಮಾನದ ದುಡಿಮೆ ನಿರಂತರವಾಗಿ ಅನಾರೋಗ್ಯ ಮತ್ತು ಶಿಕ್ಷಣಕ್ಕೆ ವ್ಯರ್ಥವಾಗುತ್ತಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತಿದ್ದು ಮರಳು ಗಣಿ ಕಲ್ಲುಗಣಿಗಾರಿಕೆ ರಿಯಲ್ ಎಸ್ಟೇಟ್ ಮಾಫಿಯಾ ಆಡಳಿತವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿವೆ.

      ಇದರಿಂದ ಮುಂದಿನ ಜನಾಂಗಕ್ಕೆ ಪ್ರಾಕೃತಿಕ ಸಂಪನ್ಮೂಲಗಳ ಕೊರತೆಯುಂಟಾಗಿ ಮನುಷ್ಯನ ಜೀವನವೇ ದುಸ್ಥಿತಿಗೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿದರು. ಆದ್ದರಿಂದ ನಮ್ಮ ಸಂಘಟನೆ ಚಿಂತನೆ ನಡೆಸಿ ರಾಜ್ಯ ರಾಜಕಾರಣದಲ್ಲಿ ಪಾದಾರ್ಪಣೆ ಮಾಡಿದ್ದು ಇದೇ ತಾಲ್ಲೂಕಿನ ರಘು ಜಾಣಗೆರೆ ಎಂಬ ಉದ್ಯಮಿಯನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಕಣಕ್ಕಿಳಿಸಲಾಗಿದೆ. ಅದೇ ರೀತಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಸ್ಪರ್ಧಿಸಿದ್ದು ರಾಜ್ಯದ ಮೊದಲನೇ ಹಂತದ 14 ಕ್ಷೇತ್ರಗಳಲ್ಲಿ 8 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.

        ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘು ಜಾಣಗೆರೆ ಮಾತನಾಡಿ, ನಮ್ಮ ಮೂಲ ಉದ್ದೇಶ ಭ್ರಷ್ಟಾಚಾರ ಮುಕ್ತ ಮಾಡುವುದಾಗಿದೆ. ನಾವು ಅಕ್ರಮ ಚುನಾವಣೆಗಳನ್ನು ತಡೆಗಟ್ಟುವುದಲ್ಲದೆ ಪ್ರಜಾಪ್ರಭುತ್ವದ ಉದ್ದೇಶ ಈಡೇರಿಸುವುದಾಗಿದೆ. ನಾವು ಮತದಾರರಿಗೆ ಯಾವುದೆ ಆಮಿಷಗಳನ್ನು ತೋರಿಸದೆ ಜನರ ಜೊತೆ ಬೆರೆತು ಕಷ್ಟ ಸುಖಗಳಿಗೆ ಸ್ಪಂದಿಸಿ ಸರ್ಕಾರದ ಸೌಲಭ್ಯಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ಜನರಿಗೆ ತಲುಪುವಂತೆ ಮಾಡಲಾಗುವುದು ಎಂದರು.

        ಈ ಸಂದರ್ಭದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಜಿ.ರಮೇಶ್, ತಾಲ್ಲೂಕು ಅಧ್ಯಕ್ಷ ಎಂ.ಡಿ.ಮೋಹನ್, ಪದಾಧಿಕಾರಿಗಳಾದ ವಿಷ್ಣುವಿಜಯ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link