ನಿಟ್ಟೂರು :
ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಎಂ.ಜಿ. ನಗರದಲ್ಲಿರುವ ಅಂಗನವಾಡಿ ಕೇಂದ್ರ ಶಿಥಿಲಗೊಂಡು ನೆಲಕ್ಕುರುಳುವ ದುಸ್ಥಿತಿಯಲ್ಲಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಂಡೂ ಕಾಣದಂತೆ ನಿರ್ಲಿಪ್ತರಾಗಿರುವುದನ್ನು ಕಂಡು ಅಂಗನವಾಡಿ ಮಕ್ಕಳ ಪೋಷಕ ವರ್ಗದ ದಲಿತ ಕುಟುಂಬಗಳು ಕಂಗಾಲಾಗಿವೆ.
ನಿಟ್ಟೂರು ಗ್ರಾಮದ ಎಂ.ಜಿ. ನಗರದಲ್ಲಿ ವಾಸವಾಗಿರುವ 125 ದಲಿತ ಕುಟುಂಬಗಳ ಮಕ್ಕಳಿಗೆ ಸೌಲಭ್ಯ ಪೂರ್ಣ ಅಂಗನವಾಡಿ ಕೇಂದ್ರ ಸಿಗದೆ, ಬಾಡಿಗೆ ಮನೆಯಲ್ಲಿ ಕೂತು ಕಲಿಕೆ ಕಲಿಯುವ ದೌರ್ಭಾಗ್ಯ ಒದಗಿದೆ. ಇಲ್ಲಿನ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಗೊಂಡು ಈಗಾಗಲೆ ಐದು ವರ್ಷ ಕಳೆದಿದೆ. ಆದರೂ ತಾಲ್ಲೂಕು ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಿಲ್ಲವೆಂದು ದಲಿತ ಮಕ್ಕಳ ಪೋಷಕರು ದೂಷಿಸಿದ್ದಾರೆ. ಶಿಥಿಲಗೊಂಡಿರುವ ಅಂಗನವಾಡಿ ಕಟ್ಟಡವನ್ನು ನೆಪಮಾತ್ರಕ್ಕೆ ಅಧಿಕಾರಿಗಳು ಬಂದು ವೀಕ್ಷಿಸಿ ಕಣ್ಣೊರೆಸಿ ಹೋಗುವುದು ಮಾಮೂಲಾಗಿದೆ ಎಂದು ದಲಿತ ಸಮೂಹ ಅಸಮಾಧಾನ ವ್ಯಕ್ತಪಡಿಸಿದೆ. ಜಡಿಮಳೆಯಿಂದ ಅಂಗನವಾಡಿ ಕೇಂದ್ರದ ಗೋಡೆ ಕುಸಿದು ಬಿದ್ದಿದೆ.
ಶಿಥಿಲ ಅಂಗನವಾಡಿ ಕೇಂದ್ರದ ದುಸ್ಥಿತಿಯಿಂದಾಗಿ ಮಕ್ಕಳ ಕಲಿಕೆಗಾಗಿ ಬಾಡಿಗೆ ಮನೆಗೆ ಮಾಸಿಕ 600 ರೂ. ಕಟ್ಟಬೇಕಾದ ದೌರ್ಭಾಗ್ಯ ಎದುರಾಗಿದೆ. ನೂತನ ಅಂಗನವಾಡಿ ಕೇಂದ್ರ ನಿರ್ಮಾಣದತ್ತ ಯಾರೂ ತಲೆಕೆಡಿಸಿಕೊಂಡಿಲ್ಲ. ಶಿಥಿಲಗೊಂಡಿರುವ ಹಳೆಯ ಅಂಗನವಾಡಿ ಕಟ್ಟಡ ಮೇಲ್ಛಾವಣಿ ಸಮೇತ ಪೂರ್ಣವಾಗಿ ಬಿದ್ದು ಹೋಗುವ ಚಿತ್ರಣ ಕಂಡೂ ಅಧಿಕಾರಿಗಳು, ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಂತೆ ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
