ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮತದಾನ ಜಾಗೃತಿ ಜಾಥಾ

ಬಳ್ಳಾರಿ
 
      ಲೋಕಸಭಾ ಚುನಾವಣೆ-2019ರ ಹಿನ್ನೆಲೆ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬೃಹತ್ ಮತದಾನ ಜಾಗೃತಿ ಜಾಥಾ ಗುರುವಾರ ನಡೆಯಿತು.
      ಜಿಲ್ಲಾಸ್ಪತ್ರೆ ಆವರಣದಿಂದ ಆರಂಭವಾದ ಈ ಮತದಾನ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಹೆಡೆ ಅವರು ಚಾಲನೆ ನೀಡಿದರು. ಜಿಲ್ಲಾಸ್ಪತ್ರೆ ಆವರಣದಿಂದ ಆರಂಭವಾದ ಜಾಥಾವು ಸಂಗಮ್ ವೃತ್ತ,ಕೆಸಿ ಸರ್ಕಲ್, ಮೀನಾಕ್ಷಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತಲುಪಿತು. ಅಲ್ಲಿಂದ ಗಡಗಿ ಚನ್ನಪ್ಪವೃತ್ತ(ರಾಯಲ್ ಸರ್ಕಲ್)ದ ಮೂಲಕ ಜಿಲ್ಲಾಸ್ಪತ್ರೆಯವರೆಗೆ ನಡೆಯಿತು.
      ಈ ಜಾಥಾದಲ್ಲಿ ಕಡ್ಡಾಯವಾಗಿ ಮತದಾನ ಮಾಡಿ, ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ, ಮತದಾನ ಮಾಡಿದವನೇ ಮಹಾಶೂರ, ಮತದಾನ ಮಾಡದಿದ್ದರೇ ಸಂವಿಧಾನಕ್ಕೆ ದ್ರೋಹ ಬಗೆದಂತೆ ಎಂಬುದು ಸೇರಿದಂತೆ ಮತದಾನ ಜಾಗೃತಿ ಮೂಡಿಸುವ ವಿವಿಧ ರೀತಿಯ ಫಲಕಗಳನ್ನಿಡಿದುಕೊಂಡು ಆಶಾ ಕಾರ್ಯಕರ್ತೆಯರು ಹಾಗೂ ಶೂಶ್ರೂಷಕಿಯರು ಜಾಥಾದಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದುದು ಗಮನಸೆಳೆಯಿತು.
       ಇದೇ ಸಂದರ್ಭದಲ್ಲಿ ಕಡ್ಡಾಯ ಮತದಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿವಿಪ್ಯಾಟ್ ಪ್ರಾತ್ಯಕ್ಷಿಕೆಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಮತ ಹಾಕುವುದರ ಮೂಲಕ ಚಾಲನೆ ನೀಡಿದರು.ಡಿಎಚ್‍ಒ ಡಾ.ಶಿವರಾಜ ಹೆಡೆ ಅವರು ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 18 ವರ್ಷ ತುಂಬಿದ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಿ, ಸುತ್ತಮುತ್ತಲಿನವರಿಗೂ ತಿಳಿಸಿ. ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಳಕ್ಕೆ ಸಹಕರಿಸಿ ಎಂದರು.
        ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ರವೀಂದ್ರನಾಥ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್, ಜಿಲ್ಲಾ ಅಂಕಿತ ಅಧಿಕಾರಿ ಡಾ.ಅನಿಲಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link