ವಿಜೃಂಭಣೆಯಿಂದ ನಡೆದ ಅಡ್ಡ ಪಲ್ಲಕ್ಕಿ ಉತ್ಸವ

ಹೊನ್ನಾಳಿ:

     ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಮಾ.28ರ ಗುರುವಾರ ಸಂಜೆ ಶುಭ ಗೋಧೂಳಿ ಮುಹೂರ್ತದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರುಗಳ “ಅಡ್ಡಪಲ್ಲಕ್ಕಿ ಉತ್ಸವ” ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ-ಸಂಭ್ರಮಗಳಿಂದ ನೆರವೇರಿತು.

        ಕಮ್ಮಾರಗಟ್ಟೆ ಗ್ರಾಮದ ಪ್ರತಿಯೊಂದು ಬೀದಿಗಳಲ್ಲೂ ಸಂಚರಿಸಿದ “ಅಡ್ಡಪಲ್ಲಕ್ಕಿ ಉತ್ಸವ”ಕ್ಕೆ ಭಕ್ತರು ಶಿರಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತಾ, ನಾಲ್ವರು ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡರು. ಕಮ್ಮಾರಗಟ್ಟೆ ಗ್ರಾಮಕ್ಕೆ ಈ ಹಿಂದೆ 1972ರಲ್ಲಿ ಅಂದಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾಧರ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಆಗಮಿಸಿದ್ದರು.

        ಗ್ರಾಮದ ಇತಿಹಾಸದಲ್ಲಿ ಇದೇ ಮೊದಲು ಪಂಚಪೀಠಗಳ ನಾಲ್ವರು ಜಗದ್ಗುರುಗಳು ಆಗಮಿಸಿ, ಭಕ್ತರನ್ನು ಹರಸಿದ್ದು ವಿಶೇಷವಾಗಿತ್ತು. ಬಸವಾಪಟ್ಟಣ ಗವಿಮಠ, ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಮತ್ತು ಹೊಟ್ಯಾಪುರ ಹಿರೇಮಠದ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ “ಅಡ್ಡಪಲ್ಲಕ್ಕಿ ಉತ್ಸವ”ದ ನೇತೃತ್ವ ವಹಿಸಿದ್ದರು. “ಅಡ್ಡಪಲ್ಲಕ್ಕಿ ಉತ್ಸವ” ವೇಳೆ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಗಮನಸೆಳೆಯಿತು. ಇದಕ್ಕೂ ಮೊದಲು ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮೂರು ಜೋಡಿ ದಾಂಪತ್ಯಕ್ಕೆ ಅಡಿ ಇಟ್ಟರು.

       ಸಾಸ್ವೇಹಳ್ಳಿ, ಬೆನಕನಹಳ್ಳಿ, ಚಿಕ್ಕಬಾಸೂರು, ಕಮ್ಮಾರಗಟ್ಟೆ ತಾಂಡಾ, ಹುಣಸೇಹಳ್ಳಿ, ತಕ್ಕನಹಳ್ಳಿ, ತರಗನಹಳ್ಳಿ, ಸಿಂಗಟಗೆರೆ, ಹೊನ್ನಾಳಿ ಪಟ್ಟಣದ ಸೇರಿದಂತೆ ತಾಲೂಕಿನ ಹಾಗೂ ಕಮ್ಮಾರಗಟ್ಟೆ ಗ್ರಾಮದ ಸುತ್ತ-ಮುತ್ತಲಿನ ಅನೇಕ ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link