ಮಧುಗಿರಿ
ಮೋದಿ ಸರಕಾರದ ಅಭಿವೃದ್ಧಿಯೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಕೈಗೊಂಡಂತಹ ನಿರ್ಣಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿರುವುದರಿಂದ ಜಿಲ್ಲೆಯಲ್ಲಿ ಈ ಬಾರಿ ಯುವಕರು ಬಿಜೆಪಿ ಪಕ್ಷದ ಪರ ಹೆಚ್ಚು ಒಲವು ಹೊಂದಿದ್ದು ನನ್ನ ಗೆಲುವಿಗೆ ಅನುಕೂಲವಾಗಲಿದೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಹಾಗೂ ರೇವಣ್ಣ ಹೇಮಾವತಿಯ ನೀರನ್ನು ತುಮಕೂರು ಜಿಲ್ಲೆಗೆ ಹರಿಸಬಾರದೆಂದು ಧರಣಿ ನಡೆಸಿದ್ದರಿಂದ, ಜಿಲ್ಲೆಯ ಕೆರೆಗಳಲ್ಲಿ ನೀರಿಲ್ಲದೆ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ದೊರಕುತ್ತಿಲ್ಲ. ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಗೆ ಹೇಮಾವತಿ ನೀರು ಹರಿಸದೆ ರಾಜಕಾರಣ ಮಾಡಿರುವ ಮಾಜಿ ಪ್ರಧಾನಿಗಳಿಗೆ ಜಿಲ್ಲೆಯ ಪ್ರಜ್ಞಾವಂತರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮುಖಂಡರಾದ ಎಂ.ಜಿ.ಶ್ರೀನಿವಾಸಮೂರ್ತಿ, ಲಕ್ಷ್ಮೀಪತಿ, ಜಯರಾಂ, ಬಸವರಾಜಯ್ಯ, ವೆಂಕಟೇಶ್, ಜಿಲ್ಲಾ ಸಂಚಾಲಕ ರಮೇಶ್, ಜಿ.ಆರ್.ಡೆವಲಪರ್ಸ್ ರವಿಕಾಂತ್, ತಿಮ್ಮರಾಜು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








