ಬೆಂಗಳೂರು
ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಾಲಕ ಸಾಯಿಚರಣ್ ಈಗ ಚೇತರಿಸಿಕೊಂಡಿದ್ದಾನೆ.ಬಾಲಕನಿಗೆ ಹಾಕಲಾಗಿದ್ದ ಕೃತಕ ಉಸಿರಾಟದ ಉಪಕರಣವನ್ನು ತೆಗೆದು ಹಾಕಲಾಗಿದ್ದು, ಸಹಜವಾಗಿಯೇ ಉಸಿರಾಡಲೂ ಅವಕಾಶ ಕಲ್ಪಿಸಲಾಗಿದೆ.
ಮುಂದಿನ 6 ಗಂಟೆಗಳ ಕಾಲ ಆತ ನೈಸರ್ಗಿಕವಾಗಿ ಉಸಿರಾಡುವುದನ್ನು ಗಮನದಲ್ಲಿಟ್ಟುಕೊಂಡು ನಂತರ ಮುಂದಿನ 2 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಬಾಲಕನ ತಂದೆ ಬಸವರಾಜ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸಾಯಿಚರಣ್ ಸದ್ಯಕ್ಕೆ ಮೊಬೈಲ್ ಗೇಮ್ ಆಡುವಷ್ಟು ಮಟ್ಟಿಗೆ ಚೇತರಿಸಿಕೊಂಡಿದ್ದಾನೆ. ಸದ್ಯ ಆತನಿಗೆ ದ್ರವ ರೂಪದ ಆಹಾರ ನೀಡಲಾಗುತ್ತಿದೆ. ಆತನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಊಟ ನೀಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಒಟ್ಟು ಚಿಕಿತ್ಸೆಗೆ 5 ಲಕ್ಷ ರೂ. ತಗುಲಲಿದೆ. ಈಗಾಗಲೇ ಆಸ್ಪತ್ರೆಗೆ 1 ವರೆ ಲಕ್ಷ ಪಾವತಿಸಿದ್ದೇವೆ. ಮೇಯರ್ ಗಂಗಾಂಬಿಕೆ ಅವರು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಶಾಸಕ ಗೋಪಾಲಯ್ಯ ಅವರು 2 ಲಕ್ಷ ರೂ. ನೆರವು ನೀಡುವ ಆಶ್ವಾಸನೆ ನೀಡಿದ್ದಾರೆ. ಈ ಮಧ್ಯೆ ಬೆಸ್ಕಾಂ ಸಂಸ್ಥೆ ಕೂಡ ಪರಿಹಾರ ನೀಡಲಿದೆ ಎಂದು ಬಸವರಾಜ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








