ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಅತ್ಯಾಧುನಿಕ ಬಸ್‌ ನಿಲ್ದಾಣ

ಬೆಂಗಳೂರು

     ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಒಂದೇ ಸೂರಿನಡಿ ಸರ್ಕಾರಿ ಕಛೇರಿಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

     ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಬಹುಮಹಡಿ ಸಂಕೀರ್ಣಗಳನ್ನು ನಿರ್ಮಿಸುವುದು,ಆ ಮೂಲಕ ಸರ್ಕಾರಿ ಕಛೇರಿಗಳು ಹಾಗೂ ಹೋಟೆಲ್ ಮತ್ತಿತರ ಸೌಲಭ್ಯಗಳು ದಕ್ಕುವಂತೆ ಮಾಡುವುದು ಸರ್ಕಾರದ ಉದ್ದೇಶ.

      ವಿಧಾನಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಈ ವಿಷಯ ತಿಳಿಸಿದರಲ್ಲದೆ,ಮೊದಲ ಹಂತದಲ್ಲಿ ಐವತ್ತು ತಾಲ್ಲೂಕುಗಳಲ್ಲಿ ಇಂತಹ ಸೌಕರ್ಯಗಳಿರುವ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದರು.

      ಇದೇ ಉದ್ದೇಶಕ್ಕಾಗಿ ತಕ್ಷಣವೇ ಇನ್ನೂರೈವತ್ತು ಕೋಟಿ ರೂಗಳನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ನುಡಿದ ಅವರು,ಸರ್ಕಾರಿ ಕೆಲಸಕ್ಕೆಂದು ತಾಲ್ಲೂಕು ಕೇಂದ್ರಗಳಿಗೆ ಬರುವವರು ಆಟೋ,ಮತ್ತಿತರ ಸೌಲಭ್ಯಗಳಿಗೆ ಪರದಾಡಬಾರದು ಎಂದರು.

     ಅವರು ಬಸ್ ಇಳಿದ ಕೂಡಲೇ ಹೋಟೆಲ್ ಹಾಗೂ ಸರ್ಕಾರಿ ಕಛೇರಿಗಳು ಒಂದೇ ಕಟ್ಟಡದಲ್ಲಿ ಇದ್ದರೆ ನಿರಾಯಾಸವಾಗಿ ಕೆಲಸ ಮಾಡಿಕೊಂಡು ಹಿಂತಿರುಗಬಹುದು ಎಂದು ಅವರು ವಿವರ ನೀಡಿದರು.
ಮಂಡ್ಯ,ಮದ್ದೂರು,ಮಳವಳ್ಳಿ,ಹಾಸನ,ಚನ್ನರಾಯಪಟ್ಟಣ,ಅರಸೀಕೆರೆ,ಬೈಂದೂರು ಸೇರಿದಂತೆ ಐವತ್ತು ತಾಲ್ಲೂಕುಗಳಲ್ಲಿ ಈ ರೀತಿಯ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳ ಕಾಮಗಾರಿ ಸಧ್ಯದಲ್ಲೇ ಆರಂಭವಾಗಲಿದೆ ಎಂದರು.

      ಹೊಸ ತಾಲ್ಲೂಕುಗಳು ಇದರಲ್ಲಿ ಸೇರಿರುತ್ತವೆ ಎಂದ ಅವರು,ಹೀಗೆ ಮಾಡುವ ಮೂಲಕ ಸಾರಿಗೆ ಸಂಸ್ಥೆ ತನ್ನದೇ ಆದ ಆದಾಯ ಮೂಲವನ್ನು ಹೊಂದಿದಂತಾಗುತ್ತದೆ.ಆ ಮೂಲಕ ಬಸ್ ನಿಲ್ದಾಣಗಳ ನಿರ್ವಹಣೆ ಕಾರ್ಯವೂ ಸುಲಭವಾಗಲಿದೆ ಎಂದರು.

      ಈ ಮಧ್ಯೆ ರಾಜ್ಯದ ಕಟ್ಟಡ ಕಾರ್ಮಿಕರು,ಗಾರ್ಮೆಂಟ್ ಫ್ಯಾಕ್ಟರಿಗಳ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ರಿಯಾಯ್ತಿ ದರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಲು ತ್ರೈಮಾಸಿಕ,ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಪಾಸುಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

       ಹೀಗೆ ರಿಯಾಯ್ತಿ ದರದ ಪಾಸುಗಳನ್ನು ನೀಡಿದರೆ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಅನುಕೂಲ ಮಾಡಿಕೊಟ್ಟಂತೆಯೂ ಆಗುತ್ತದೆ.ಸಾರಿಗೆ ಸಂಸ್ಥೆಗೆ ನಿರ್ದಿಷ್ಟ ಪ್ರಮಾಣದ ಹಣ ಮುಂಚಿತವಾಗಿ ಸಿಕ್ಕಂತೆಯೂ ಆಗುತ್ತದೆ ಎಂದರು.

       ಸಂಸ್ಥೆಯ ಬಸ್ಸುಗಳ ಬಿಡಿ ಭಾಗಗಳನ್ನು ಖರೀದಿಸುವ ವಿಷಯದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು ಇದನ್ನು ತಡೆಗಟ್ಟಲು ಬಿಡಿ ಭಾಗಗಳ ತಯಾರಿಕರನ್ನೇ ಬಿಡ್ ಮೂಲಕ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದರು.

        ಸಧ್ಯದ ಸ್ಥಿತಿಯಲ್ಲಿ ಬಸ್ ನಿರ್ಮಾಣ ಕಂಪನಿಗಳ ಹೆಸರಿನಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ.ಆದರೆ ವಾಸ್ತವದಲ್ಲಿ ಅದು ಸಿಟಿ ಮಾರುಕಟ್ಟೆಯಲ್ಲಿನ ತಯಾರಿಕರಿಂದಲೇ ಬರುತ್ತದೆ.ಹೀಗಾಗಿ ಇನ್ನು ಮುಂದೆ ಕಂಪನಿಗಳ ಹೆಸರಿನಲ್ಲಿ ಖರೀದಿ ಮಾಡುವ ಬದಲು ಉತ್ಪಾದಕರಿಂದಲೇ ಖರೀದಿ ಮಾಡುವುದಾಗಿ ಅವರು ಹೇಳಿದರು.

        ಹಾಗೆಯೇ ಬಸ್ಸಿನ ಟೈರುಗಳು ಬಹುಕಾಲ ಬಾಳಿಕೆ ಬರುತ್ತಿಲ್ಲ.ಇದನ್ನು ಗಮನದಲ್ಲಿಟ್ಟುಕೊಂಡು ಟೈರ್ ಉತ್ಪಾದನಾ ಘಟಕಗಳನ್ನೂ ಸಂಸ್ಥೆಯ ಪ್ರಾಂಗಣದಲ್ಲಿಯೇ ನಿರ್ಮಿಸಲಾಗುವುದು ಎಂದ ಅವರು,ಬಸ್ಸಿನ ಬಿಡಿ ಭಾಗಗಳ ತಯಾರಿಕೆ ಮಾಡುವವರಿಗೂ ಘಟಕಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

        ಐಟಿ ಯೂನಿಟ್ ಹೆಸರಿನಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆಯುತ್ತಿದ್ದು ಇದನ್ನು ತಡೆಗಟ್ಟಿದ್ದಲ್ಲದೆ ತನಿಖೆಗೂ ಆದೇಶ ನೀಡಲಾಗಿದೆ.ವಿವಿಧ ರೀತಿಯ ಅವ್ಯವಹಾರಗಳಲ್ಲಿ ಭಾಗಿಯಾದ ಎಪ್ಪತ್ತೈದಕ್ಕೂ ಹೆಚ್ಚು ಮಂದಿ ನೌಕರರು,ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದರು.

        ಖಾಸಗಿ ಬಸ್ಸುಗಳಂತೆಯೇ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಹೊಸ ಬಸ್ಸುಗಳನ್ನು ರಸ್ತೆ ಸಾರಿಗೆ ಸಂಸ್ಥೆ ಬಿಡುಗಡೆ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು,ಖಾಸಗಿಯವರಿಗೆ ಪೈಪೋಟಿ ನೀಡಲು ಅಗತ್ಯವಾಗುವಂತೆ ಸಂಸ್ಥೆಯನ್ನು ಸಜ್ಜುಗೊಳಿಸಬೇಕಿದೆ ಎಂದು ವಿವರಿಸಿದರು.
ಹೊಸ ವಿನ್ಯಾಸ,ಅತ್ಯಾಕರ್ಷಕ ಬಣ್ಣದೊಂದಿಗೆ ಕೆಎಸ್‍ಆರ್‍ಟಿಸಿ,ಬಿಎಂಟಿಸಿ ಬಸ್ಸುಗಳು ಮಿನುಗುವಂತೆ ಮುಂದಿನ ದಿನಗಳಲ್ಲಿ ನೋಡಿಕೊಳ್ಳಲಾಗುವುದು ಎಂದ ಅವರು,ರಸ್ತೆ ಸಾರಿಗೆ ಸಂಸ್ಥೆ ಹೊಸತಾಗಿ ಮೂರೂವರೆ ಸಾವಿರ ಬಸ್ಸುಗಳನ್ನು ಖರೀದಿಸಲಿದೆ ಎಂದರು.

      ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣ ದರ ಏರಿಕೆ ನಿಶ್ಚಿತ ಎಂದ ಅವರು,ಒಂದು ವೇಳೆ ನಾವು  ಬಸ್ ಪ್ರಯಾಣ ದರ ಹೆಚ್ಚಳ ಮಾಡದಿದ್ದರೆ ಸರ್ಕಾರದಿಂದ ಅನುದಾನ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಸ್ಪಷ್ಟ ಪಡಿಸಿದರು.

        ರಾಜ್ಯಾದ್ಯಂತ ಇರುವ ಸಾರಿಗೆ ಇಲಾಖೆ ಚೆಕ್ ಪೋಸ್ಟ್‍ಗಳು ಪರೋಕ್ಷವಾಗಿ ಮಾಫಿಯಾ ನಿಯಂತ್ರಣದಲ್ಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು,ಇದನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

       ಸಧ್ಯದ ಸ್ಥಿತಿಯಲ್ಲಿ ಏಳುನೂರೈವತ್ತು ಆರ್.ಟಿ.ಓ ಪೋಸ್ಟುಗಳಿದ್ದರೂ ನಾಲ್ಕು ನೂರು ಮಂದಿಯಷ್ಟೇ ಕೆಲಸ ಮಾಡುತ್ತಿದ್ದಾರೆ.ಹೀಗಾಗಿ ಉಳಿದ ಪೋಸ್ಟುಗಳನ್ನು ಸಾರಿಗೆ ಸಂಸ್ಥೆಯ ವತಿಯಿಂದಲೇ ಭರ್ತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link