ದಾವಣಗೆರೆ:
ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನದಿಂದ ಚುನಾವಣೆಯಲ್ಲಿ ನನಗೆ ಹಿನ್ನಡೆಯಾಗಿದೆ. ಸೋತ ಕಾರಣಕ್ಕೆ ಎದೆಗುಂದುವ ಅವಶ್ಯಕತೆಯೇ ಇಲ್ಲ. ಜಿಲ್ಲಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆಂದು ಲೋಕಸಭೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಹಜ. ಆದರೆ, ಸೋತಿರುವ ಕಾರಣಕ್ಕೆ ಎದೆಗುಂದಿ ಮನೆಯಲ್ಲಿ ಕುರುವುದಿಲ್ಲ. ನಾನು 18ನೇ ವರ್ಷದಿಂದಲೇ ರಾಜಕೀಯಕ್ಕೆ ಪ್ರವೇಶಿಸಿ, ಪುರಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‍ಗಳ ಸದಸ್ಯನಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಮುಂದೆಯೂ ತಮ್ಮ ರಾಜಕೀಯ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದಕ್ಕೆ ಪಕ್ಷದ ಕಾರ್ಯಕರ್ತರು ಯಾರೂ ಸಹ ಎದೆ ಗುಂದಬೇಡಿ, ಈ ಚುನಾವಣೆಯಲ್ಲಿ ಕೆಲ ಕಾರಣಗಳಿಂದ ಹಿನ್ನಡೆಯಾಗಿದೆ ಅಷ್ಟೇ. ಆದರೆ, ಭಾರತದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಆದ್ದರಿಂದ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿ, ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ಕರೆ ನೀಡಿದರು.
ಪುಲ್ವಾಮಾ ದಾಳಿ ಹಾಗೂ ಬಾಲಕೋಟ್‍ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‍ನಿಂದಾಗಿ ದೇಶದಲ್ಲಿ ಪರಿವರ್ತನೆಯಾಗಿ, ಮೋದಿ ಪರ ಗಾಳಿ ಬೀಸಲಾರಂಭಿಸಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿಯವರು, ಮೋದಿಯ ಹೆಸರಿನಲ್ಲಿ ಮತ ಕೇಳಿದರೆ ಹೊರತು, ಅವರು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಆಧಾರದಲ್ಲಿ ಎಲ್ಲೂ ಮತ ಕೇಳಲಿಲ್ಲ. ಅಲ್ಲದೇ, ಬಿಜೆಪಿಯವರು ಯುವಕರ ಬ್ರೇನ್‍ವಾಶ್ ಮಾಡಿ, ಕುರುಡು ಮತಾಂಧತೆ ಬಿತ್ತಿರುವುರು ಬಿಜೆಪಿ ಗೆಲುವಿಗೆ ವರದಾನವಾಯಿತು ಎಂದರು.
ನನಗೆ ಕೇಚಲ 17 ದಿನಗಳು ಮಾತ್ರ ಚುನಾವಣಾ ಪ್ರಚಾರ ಕೈಗೊಳ್ಳಲು ಅವಕಾಶ ಸಿಕ್ಕಿತ್ತು. ಹೀಗಾಗಿ ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳನ್ನು ತಲುಪಲಾಗಲಿಲ್ಲ. ಆದರೆ, ಗ್ರಾಮ ಪಂಚಾಯತ್‍ವಾರು ಮತ ಯಾಚನೆ ಕಾರ್ಯಕ್ರಮ ನಡೆಸಿದರೂ ಸಹ ಎಲ್ಲ ಗ್ರಾಮ ಪಂಚಾಯತ್‍ಗಳನ್ನು ಮುಟ್ಟಲಾಗಲಿಲ್ಲ. ಇದುವೇ ನನ್ನ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಂಡರು.
ನನಗೆ ಮೈತ್ರಿಯ ಭಾಗವಾಗಿರುವ ಜೆಡಿಎಸ್ ಮುಖಂಡರು ಉತ್ತಮವಾಗಿ ಸಹಕಾರ ನೀಡದರು.
ಅದರಲ್ಲೂ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಹಳ್ಳಿ, ಹಳ್ಳಿಗೂ ಹೋಗಿ ಪ್ರಚಾರ ನಡೆಸಿದರು. ಆದರೆ, ಕೆಲವೆಡೆ ನನ್ನ ರಾಜಕೀಯ ಬೆಳವಣಿಗೆ ಸಹಿಸದ ಕೆಲ ಕಾಣದ ಕೈಗಳ ಪ್ರಯತ್ನವೂ ನನ್ನ ಸೋಲಿಗೆ ಕಾಣವಾಗಿದೆ. ಅಲ್ಲದೆ, ನನಗೆ ಕಡಿಮೆ ಕಾಲಾವಧಿ ಸಿಕ್ಕಿದ್ದರ ಪರಿಣಾಮವಾಗಿ, ಬೆಳಿಗ್ಗೆ ಪ್ರಚಾರಕ್ಕೆ ಹೋದರೆ, ರಾತ್ರಿ 10 ಗಂಟೆಗೆ ಮನೆ ಸೇರುತ್ತಿದ್ದೆ. ಹೀಗಾಗಿ ಜಿಲ್ಲಾ ಮಂತ್ರಿ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಹಲವು ನಾಯಕರನ್ನು ಸಂಪರ್ಕಿಸಲಾಗಿಲ್ಲ. ಇದವೂ ನನ್ನ ಹಿನ್ನಡೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದೇ ಕಾಂಗ್ರೆಸ್‍ನ ಅಧೋಗತಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ಸರಿ ಏನಿಸಿದರೂ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನಡೆಸಲು ಬಿಡಬಾರದೆಂಬ ಏಕೈಕ ಕಾರಣಕ್ಕೆ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮುಖಂಡರ ಮಧ್ಯೆ ಉತ್ತಮವಾಗಿ ಹೊಂದಾಣಿಕೆ ಇದ್ದರೆ, ಇನ್ನೂ ಕೆಲವು ಕಡೆ ಹೋಂದಾಣಿಕೆ ಕೊರತೆ ಇದೆ ಎಂದು ಸ್ಪಷ್ಟಪಡಿಸಿದರು.
ವೈಯಕ್ತಿಕ ಕಾರಣಕ್ಕೆ ಶಾಮನೂರು ಶಿವಶಂಕರಪ್ಪನವರು ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಟಿಕೆಟ್ ನಿರಾಕರಿಸಿದರು. ಹೀಗಾಗಿ ನನಗೆ ಕೊನೆ ಕ್ಷಣಕ್ಕೆ ಟಿಕೆಟ್ ಸಿಕ್ತೇ ಹೊರತು, ಯಾರೋ ನನ್ನನ್ನು ಕರೆ ತಂದು, ಚುನಾವಣೆಯಲ್ಲಿ ಬಲಿಪಶು ಮಾಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಹರಿಹರ ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಶಾಂತನಗೌಡ, ವಡ್ನಾಳ್ ರಾಜಣ್ಣ, ಹೆಚ್.ಪಿ.ರಾಜೇಶ್, ದಿವಂಗತ ಪಿ.ಎಂ.ಪ್ರಕಾಶ್ ಅವರ ಪುತ್ರಿ ವೀಣಾ ಮಲ್ಲಿಕಾರ್ಜುನ, ಲತಾ, ಕಾಂಗ್ರೆಸ್ ಮುಖಂಡ ತೇಜಸ್ವಿ ಪಟೇಲ್, ನಮ್ಮ ಮೈತ್ರಿಯ ಭಾಗವಾಗಿರುವ ಜೆಡಿಎಸ್‍ನ ಮುಖಂಡರಾದ ಹೆಚ್.ಎಸ್.ಶಿವಶಂಕರ್, ಬಿ.ಚಿದಾನಂದಪ್ಪ, ಟಿ.ಗಣೇಶ ದಾಸಕರಿಯಪ್ಪ, ಅರಸೀಕೆರೆ ಕೊಟ್ರೇಶ್, ಹೊದಿಗೆರೆ ರಮೇಶ್, ನನಗೆ ಬೆಂಬಲಿಸಿದ ಕಮ್ಯುನಿಷ್ಟ್ ಪಕ್ಷದ ಹೆಚ್.ಕೆ.ರಾಮಚಂದ್ರಪ್ಪ, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಹಾಗೂ ನನ್ನ ಮೊದಲ ಪ್ರಯತ್ನಕ್ಕೆ 4,83,292 ಮತಗಳನ್ನು ನೀಡಿರುವ ಎಲ್ಲ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರದ ದಿನೇಶ್ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್, ಎ.ನಾಗರಾಜ, ಕೆ.ಜಿ.ಶಿವಕುಮಾರ್, ಶುಭಮಂಗಳ, ಸುಧಾಗೌಡ, ಯುವರಾಜ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ