ಅಮೃತದಂತಿರುವ ಹಾಲಿಗೂ ರಾಸಾಯನಿಕ ಬೆರಕೆ ಸಲ್ಲ:ಹೆಚ್.ಕೆ ಬಸಪ್ಪ

ದಾವಣಗೆರೆ:

    ಅಮೃತಕ್ಕೆ ಸಮನಾಗಿರುವ ಹಾಲಿಗೂ ಇಂದು ರಾಸಾಯನಿಕ ಬೆರೆಸುವ ಮೂಲಕ ಕಲಬೆರಕೆ ಮಾಡುತ್ತಿರುವುದು ಸರಿಯಲ್ಲ ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಹೆಚ್.ಕೆ ಬಸಪ್ಪ ತಿಳಿಸಿದರು.

    ನಗರದ ಕುವೆಂಪು ಕನ್ನಡ ಭವನದಲ್ಲಿ ಎನ್‍ಡಿಡಿಬಿ ಹಾಗೂ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವುಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಪೌಷ್ಟಿಕ ಮತ್ತು ಪರಿಪೂರ್ಣ ಆಹಾರ ಯಾವುದಾದರು ಇದ್ದರೆ, ಅದು ಹಾಲು ಮಾತ್ರ. ಅಮೃತಕ್ಕೆ ಸಮಾನಾಗಿರುವ ಹಾಲಿಗೂ ಇಂದು ಕಲಬೆರಕೆ, ರಾಸಾಯನಿಕಗಳನ್ನು ಬೆರೆಸಲಾಗುತ್ತಿದೆ. ಆದರೆ, ನಂದಿನಿ ಹಾಲು ಕಲಬೆರಕೆ ಮುಕ್ತ, ಉತ್ಕøಷ್ಟ ಗುಣಮಟ್ಟದ ಹಾಲು ಆಗಿದ್ದು, ಎಲ್ಲರೂ ಇದನ್ನು ಬಳಸಬೇಕೆಂದು ಸಲಹೆ ನೀಡಿದರು.

      ಹುಟ್ಟಿನಿಂದ ಜೀವನದ ಅಂತ್ಯದವರೆಗೂ ನಾವೆಲ್ಲಾ ಹಾಲನ್ನು ಉಪಯೋಗಿಸುತ್ತೇವೆ. ಇಂತಹ ಹಾಲಿನ ಪ್ರಾಮುಖ್ಯತೆಯನ್ನು ತಿಳಿಸಲು ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇಂದು ವಿಶ್ವದ ಸುಮಾರು 60 ದೇಶಗಳಲ್ಲಿ ಹಾಲು ದಿನಾಚರಣೆ ಆಚರಿಸುವ ಮೂಲಕ ಹಾಲಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

       2017ರಲ್ಲಿ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಹಾಲು ದಿನಾಚರಣೆ ಆರಂಭಿಸಲಾಯಿತು. ಹಾಲಿನಲ್ಲಿ ಅತ್ಯುತ್ಕೃಷ್ಟ ಪೌಷ್ಟಿಕಾಂಶಗಳು ಇದ್ದು, 54 ರೀತಿಯ ವಿವಿಧ ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇವು ರುಚಿಕಟ್ಟಾಗಿ ಸಹ ಇದ್ದು, ಯಾವುದೇ ರಾಸಾಯನಿಕ ಗಳನ್ನು ಬಳಸದೇ ತಯಾರಿಸಲಾಗುತ್ತಿದೆ. ಹಾಲು ಉತ್ಪಾದಕರಾದ ರೈತರು ಕೂಡ ಸ್ವಚ್ಚತೆ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

       ಡೇರಿ ಜಾಗೃತಿ ಅಭಿಯಾನದ ಮೂಲಕ ಅನಾಥಾಶ್ರಮ, ವೃದ್ಧಾಶ್ರಮ, ಶಾಲೆಗಳು ಸೇರಿದಂತೆ ವಿವಿಧೆಡೆ ಹಾಲನ್ನು ವಿತರಿಸುವ ಮೂಲಕ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಬಾರಿ ವಿಶ್ವ ಹಾಲು ದಿನಾಚರಣೆಯನ್ನು ಘಟಕದ ಮೂರೂ ಜಿಲ್ಲೆಗಳಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ ಎಂದರು.

      ಒಕ್ಕೂಟದ ನಿರ್ದೇಶಕ ಕೆ.ಎನ್.ಸೋಮಶೇಖರಪ್ಪ ಮಾತನಾಡಿ, ಪ್ರಸ್ತುತದಲ್ಲಿ ಹಾಲು ಅತ್ಯವಶ್ಯ ಆಹಾರ ಪದಾರ್ಥವಾಗಿದ್ದು, ನಾವೆಲ್ಲಾ ಉತ್ತಮವಾದ ಹಾಲನ್ನೇ ಬಳಸೋಣ. ಇಂದು ಮಾರುಕಟ್ಟೆಯಲ್ಲಿ ಹಲವಾರು ಕಲಬೆರಕೆಯ, ರಾಸಾಯನಿಕಯುಕ್ತವಾದ ಹಾಲು ದೊರಕುತ್ತಿದೆ. ಜನರು ಇದಕ್ಕೆ ಮಾರು ಹೋಗದೇ ನಂದಿನಿ ಹಾಲನ್ನು ಬಳಸುವುದು ಸೂಕ್ತ. ಜನರಿಗೆ ವಿಷ ಉಣ್ಣಿಸುವುದನ್ನು ನಿಲ್ಲಿಸಬೇಕು ಎಂದರು.

       ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಜಗದೀಶಪ್ಪ ಬಣಕಾರ ಮಾತನಾಡಿ, ಇತ್ತೀಚೆಗೆ ಹಾಲನ್ನು ಆರ್ಥಿಕವಾಗಿ ನೋಡಲಾಗುತ್ತಿದೆ. ಹಿಂದೆಲ್ಲಾ ಎಷ್ಟೇ ಲೀಟರ್ ಹಾಲು ಕರೆದರೂ ಮಾರುಕಟ್ಟೆ ಇರಲಿಲ್ಲ. ಇಂದು ರೈತರು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಶ್ವ ಹಾಲು ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೇ ದಿನನಿತ್ಯ ಹಾಲಿನ ದಿನವಾಗಬೇಕು ಎಂದ ಅವರು ಹಾಲು ಉತ್ಪಾದಕರು ಹಾಲಿನ ಸ್ವಚ್ಚತೆ-ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

        ಅಪರ ನಿರ್ದೇಶಕ ಡಾ.ಕೆ.ಎಂ.ಲೋಹಿತೇಶ್ವರ ಪಿಪಿಟಿ ಪ್ರದರ್ಶನದ ಮೂಲಕ ಹಾಲಿನ ಮಹತ್ವ, ಉಪಯೋಗಗಳ ಬಗ್ಗೆ ವಿವರಿಸುತ್ತಾ, ಹಾಲಿನಲ್ಲಿ ಎಲ್ಲ ಅವಶ್ಯಕ ಪ್ರೋಟಿನ್‍ಗಳು, ಕಾರ್ಬೋಹೈಡ್ರೇಟ್‍ಗಳು, ಕೊಬ್ಬಿನಂಶ, ವಿಟಮಿನ್‍ಗಳು, ಮಿನರಲ್‍ಗಳು, ಫೈಬರ್ ಮತ್ತು ನೀರಿನಂಶ ಇದೆ. ಶೇ. 87 ನೀರಿನ ಅಂಶ ಮತ್ತು ಶೇ. 13 ಪೌಷ್ಟಿಕಾಂಶಗಳಿವೆ. ಮಹಿಳೆಯರು ಮತ್ತು ಮಕ್ಕಳಿಗೆ ಅತ್ಯಗತ್ಯವಾಗಿರುವ ಕ್ಯಾಲ್ಶಿಯಂ ಇದರಲ್ಲಿ ಯಥೇಚ್ಚವಾಗಿದೆ ಎಂದರು.

         ಹೊನ್ನಾಳಿ ತಾಲ್ಲೂಕಿನ ಮಾದನಬಾವಿ ಹಾಲು ಸಹಕಾರ ಸಂಘದ ಅಧ್ಯಕ್ಷ ಆನಂದಪ್ಪ ಮಾತನಾಡಿ, ಹೈನುಗಾರಿಕೆ ಇಂದು ಕಷ್ಟಕರವಾಗಿದೆ. ಆದರೂ ರೈತರು ಕಷ್ಟಪಟ್ಟು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಮದ್ಯದಂತಹ ಮಾರಕ ವಸ್ತುಗಳು ಅತ್ಯಂತ ದುಬಾರಿಯಾಗಿವೆ. ಆದರೆ ಪೂರಕ ಆಹಾರವಾದ ಹಾಲಿನ ಬೆಲೆ ಕಡಿಮೆ ಇದೆ. ಈ ಹಾಲಿನ ಮಹತ್ವ ತಿಳಿಯಬೇಕಾದರೆ ಹಾಲಿನ ದರ ಹೆಚ್ಚಿಸಬೇಕೆಂದು ಆಗ್ರಹಿಸಿದರು.

      ಶಿದಾಚಿಸಹಾಒ ಉಪ ವ್ಯವಸ್ಥಾಪಕ ಸುರೇಶ್ ಹುಳ್ಳಿ ಸ್ವಾಗತಿಸಿದರು. ರೂಪಾ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಒಕ್ಕೂಟದ ವೇದಮೂರ್ತಿ ಒಕ್ಕೂಟದ ಘೋಷವಾಕ್ಯ ಪಠಿಸಿದರು. ಎಫ್‍ಎಸ್‍ಎಸ್‍ಎಐ ಕೊಟ್ರೇಶ್, ಆಹಾರ ತಜ್ಞರಾದ ಶೃತಿ ಹಾಲಿನ ಕುರಿತು ಉಪನ್ಯಾಸ ನೀಡಿದರು. ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎನ್.ಗುರುಶೇಖರ್ ಉಪನ್ಯಾಸ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link