ರಸ್ತೆ ಅಪಘಾತದಲ್ಲಿ ನಿವೃತ್ತ ಪೊಲೀಸ್ ಪೇದೆ ಸಾವು..!!

ಬೆಂಗಳೂರು

     ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದು ನಿವೃತ್ತ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಧಾರುಣ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುಕಟ್ಟೆ ಬಳಿ ನಡೆದಿದೆ.

      ಮೃತಪಟ್ಟವರನ್ನು ಮಡಿವಾಳದ ಕೆಎಸ್‍ಆರ್‍ಪಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ರಾಜ್ಯ ಮೀಸಲುಪಡೆಯ (ಕೆಎಸ್‍ಆರ್‍ಪಿ) ನಿವೃತ್ತ ಪೇದೆ ರಾಮರಾವ್ (65)ಎಂದು ಗುರುತಿಸಲಾಗಿದೆ.ಮಡಿವಾಳ ಮಾರುಕಟ್ಟೆ ಬಳಿ ಕಳೆದ ಸೋಮವಾರ ಮಧ್ಯಾಹ್ನ 1.15ರ ವೇಳೆ ರಾಮರಾವ್ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದಿದೆ.

        ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ರಾಮರಾವ್ ಅವರನ್ನು ಕೂಡಲೇ ಹತ್ತಿರದ ವೆಂಕಟೇಶ್ವರ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಆಟೋ ಪತ್ತೆ

     ರಾಮರಾವ್ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆಟೋದ ದೃಶ್ಯ ಹತ್ತಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತಾದರೂ, ಅದರ ಸಂಖ್ಯೆ ಕಾಣಿಸುತ್ತಿರಲಿಲ್ಲ. ಆದರೆ ಹಸಿರು ಬಣ್ಣದಿಂದ ಬರೆದ ಅಕ್ಷರಗಳು ಕಾಣಿಸಿವೆ.
ಅದನ್ನು ಆಧರಿಸಿ ಮಡಿವಾಳ ಮಾರ್ಕೆಟ್ ಸುತ್ತಮುತ್ತಲ ಸುಮಾರು 20ಕ್ಕೂ ಹೆಚ್ಚು ಆಟೋ ಚಾಲಕರನ್ನು ವಿಚಾರಣೆ ನಡೆಸಲಾಯಿತಾದರೂ ಆಟೋದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿರಲಿಲ್ಲ. ಕೊನೆಗೆ ಲಾಲ್‍ಬಾಗ್ ಸಿದ್ದಾಪುರದ ಬಳಿ ಮನೆಯೊಂದರ ಮುಂದೆ ನಿಂತಿದ್ದ ಎರಡು ಆಟೋಗಳನ್ನು ಅನುಮಾನಾಸ್ಪದವಾಗಿ ಪರಿಶೀಲನೆ ನಡೆಸಲಾಯಿತು.

ಸಿಕ್ಕಿಬಿದ್ದ ಚಾಲಕ

       ಅದರಲ್ಲಿ ಒಂದು ಆಟೋ ಅಪಘಾತವೆಸಗಿದ ಆಟೋಗೆ ಹೋಲಿಕೆಯಾಗಿದ್ದು, ಅದರ ಚಾಲಕ ಶೋಯೆಬ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಘಾತವೆಸಗಿರುವುದನ್ನು ಬಾಯಿಬಿಟ್ಟಿದ್ದಾನೆ. ಆತನನ್ನು ಬಂಧಿಸಿರುವ ಮಡಿವಾಳ ಸಂಚಾರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಗವಿಸಿದ್ದಪ್ಪ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link