ಚಿತ್ರದುರ್ಗ
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಪರಿಶಿಷ್ಠರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ತಲುಪಿಸಲು ಮುಖಂಡರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾದ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರ ಮೇಲೆ ನಡೆಯುವ ಕೊಲೆ, ಅತ್ಯಾಚಾರ ಸೇರಿದಂತೆ ವಿವಿಧ ದೌರ್ಜನ್ಯ ಪ್ರಕರಣಗಳಲ್ಲಿ ಸರ್ಕಾರದ ನಿಯಮಗಳಂತೆ ಪರಿಹಾರ ಧನವನ್ನು ಅನಗತ್ಯವಾಗಿ ವಿಳಂಬ ಮಾಡದೆ, ತ್ವರಿತವಾಗಿ ದೊರಕಿಸಿಕೊಡಬೇಕು.
ಅದೇ ರೀತಿ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆಯಾಗದಂತೆಯೂ ಜಾಗೃತಿ ಮೂಡಿಸಬೇಕಿದೆ ಎಂದರು ಕಾನೂನು ಸರಿಯಾಗಿ ತಿಳಿದುಕೊಂಡಾಗ ಮಾತ್ರ, ಗೌರವದಿಂದ ಬದುಕಲು ಸಾಧ್ಯ. ಪರಿಶಿಷ್ಟರ ರಕ್ಷಣೆಗಾಗಿ ಸರ್ಕಾರ ರೂಪಿಸಿರುವ ಕಾನೂನು, ಕಾಯ್ದೆಯ ಬಗ್ಗೆ ಪ್ರತಿಯೊಂದು ಗ್ರಾಮಗಳಲ್ಲೂ ಅರಿವು ಮೂಡಿಸುವುದು ಅಗತ್ಯವಿದೆ. ಅದರ ಜೊತೆಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನೇ ವೇದಿಕೆಯಾಗಿಸಿಕೊಂಡು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿಯೇ ಸರ್ಕಾರ ಜಾರಿಗೊಳಿಸಿರುವ ಹಲವಾರು ಯೋಜನೆಯ ಸವಲತ್ತುಗಳ ಬಗ್ಗೆಯೂ ಸಮುದಾಯದಲ್ಲಿ ಅರಿವು ಮೂಡಿಸಿ, ಯೋಜನೆಯ ಸೌಲಭ್ಯವನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಸಮಿತಿಯ ಸದಸ್ಯರು ಪ್ರಾಮಾಣಿಕವಾಗಿ ಮಾಡಲು ಮುಂದಾಗಬೇಕು. ನಿಜವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವವರನ್ನು ಗುರುತಿಸಿ, ಅವರಿಗೆ ಪರಿಹಾರ ಹಾಗೂ ಸೌಲಭ್ಯ ತಲುಪಿಸಬೇಕು. ಎಲ್ಲರೂ ಕಾನೂನನ್ನು ಸರಿಯಾಗಿ ತಿಳಿದುಕೊಂಡು, ಕಾನೂನಿನಂತೆ ನಡೆದುಕೊಳ್ಳೋಣ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಪರಿಶಿಷ್ಠರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ನೀಡುವ ಹಾಗೂ ತಪ್ಪಿತಸ್ಥರಿಗೆ ಶಿಕ್ಷಿಸುವ ಕಾಯ್ದೆಯನ್ನು ಜಾರಿಗೊಳಿಸಿದೆ. ಆದರೆ ಕಾಯ್ದೆಯ ಉಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ. ಕಾಯ್ದೆಯ ದುರುಪಯೋಗವಾಗದಂತೆ ಎಚ್ಚರ ವಹಿಸುವುದೂ ಅಗತ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟರ ಮನೋಭಾವನೆಯಲ್ಲೂ ಬದಲಾವಣೆಯಾಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸರ್ಕಾರ ಪರಿಶಿಷ್ಟರಿಗಾಗಿಯೇ ಅನುದಾನದಲ್ಲಿ ಶೇ. 22.75 ರಷ್ಟು ಮೀಸಲಿಡುತ್ತಿದ್ದು, ಪರಿಶಿಷ್ಟರ ಕಾಲೋನಿಗಳಿಗೆ ಉತ್ತಮ ರಸ್ತೆ, ಚರಂಡಿ, ಮೂಲಭೂತ ಸೌಕರ್ಯ, ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಕ್ಕಳಿಗೆ ಉಚಿತ ಹಾಗೂ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಹಾಸ್ಟೆಲ್‍ಗಳ ಸೌಲಭ್ಯ ಅತ್ಯುತ್ತಮವಾಗಿ ಒದಗಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರು ಮಾತನಾಡಿ, ಗ್ರಾಮಗಳಲ್ಲಿ ಎಲ್ಲ ವರ್ಗದವರೂ ಸೌಹಾರ್ದಯುತವಾಗಿ ಇರಬೇಕು. ಆದರೆ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು, ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಮಿತಿಯ ಸದಸ್ಯ ಅರುಣ್‍ಕುಮಾರ್ ಮಾತನಾಡಿ, ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳ ಗಡಿ ಭಾಗಗಳಲ್ಲಿ ಈಗಲೂ ಅಸ್ಪಷ್ಯತೆ ಜೀವಂತವಾಗಿದೆ. ಅಧಿಕಾರಿಗಳು ಈ ಗ್ರಾಮಗಳತ್ತ ಗಮನ ಹರಿಸಿ, ಶೋಷಣೆಯನ್ನು ತಪ್ಪಿಸಬೇಕು. ಬಾಧಿತರಿಗೆ ಪರಿಹಾರ ಹಾಗೂ ಸೌಲಭ್ಯ ಒದಗಿಸಬೇಕು. ಇಂತಹ ಗಡಿಭಾಗಗಳ ಗ್ರಾಮಗಳಲ್ಲಿ ಪರಿಶಿಷ್ಟರ ರಕ್ಷಣೆಗಾಗಿ ಇರುವ ಕಾನೂನು ಹಾಗೂ ಸೌಲಭ್ಯಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗಬೇಕಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಮಾತನಾಡಿ, 2019-20 ನೇ ಸಾಲಿನಲ್ಲಿ ಪರಿಶಿಷ್ಠರ ಮೇಲಿನ ಕೊಲೆ-01, ಅತ್ಯಾಚಾರ-02, ಜಾತಿನಿಂದನೆ-17 ಸೇರಿದಂತೆ ಒಟ್ಟು 20 ಪ್ರಕರಣಗಳಿಗೆ ಸಂಬಂಧಿಸಿದಂತೆ 41. 90 ಲಕ್ಷ ರೂ. ಗಳ ಪರಿಹಾರಧನವನ್ನು ಸಂತ್ರಸ್ತರಿಗೆ ನೀಡಲಾಗಿದೆ. 34 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್, ಡಿವೈಎಸ್‍ಪಿ ವಿಜಯಕುಮಾರ್ ಸಂತೋಷ್, ನಗರಸಭೆ ಪೌರಾಯುಕ್ತ ಚಂದ್ರಪ್ಪ ಸೇರಿದಂತೆ ಜಾಗೃತ ಸಮಿತಿಯ ನೂತನ ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.