ಬಳ್ಳಾರಿ
ಬಳ್ಳಾರಿ ಜಿಲ್ಲೆಯಲ್ಲಿ 3.70ಲಕ್ಷ ರೈತರಿದ್ದು, ಅದರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಇದುವರೆಗೆ 2.05ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ರೈತರ ನೋಂದಣಿಗೆ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1.76 ಲಕ್ಷ ರೈತರ ಡಾಟಾ ಈಗಾಗಲೇ ಎಂಟ್ರಿ ಮಾಡಲಾಗಿದೆ. ಇನ್ನೂ 30 ಸಾವಿರ ಡಾಟಾ ನಮ್ಮಕೈಯಲ್ಲಿದ್ದು,ಶೀಘ್ರ ಎಂಟ್ರಿ ಮಾಡಲಾಗುವುದು. ಉಳಿದ ರೈತರ ನೋಂದಣಿಗೆ ತಹಸೀಲ್ದಾರರು ವಿಶೇಷ ಆಸಕ್ತಿ ವಹಿಸಬೇಕು. ಈ ಕುರಿತಂತೆ ಗ್ರಾಮಲೆಕ್ಕಾಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿ ಸಮಾರೋಪಾದಿಯಲ್ಲಿ ನೋಂದಣಿ ಪ್ರಕ್ರಿಯೆ ಜರುಗಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿ ನಕುಲ್ ಅವರು, ಮುಂದಿನ ವಾರ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಲಾಗುವುದು; ಅಧಿಕ ಪೆಂಡಿಂಗ್ ಇರುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಮ್ಮ ಗ್ರಾಮಲೆಕ್ಕಾಧಿಕಾರಿಗಳು ಫಿಲ್ಡ್ಗೆ ಹೋಗುತ್ತಿಲ್ಲವಾದ್ದರಿಂದ ಪಿಎಂಕೆ ಸಮ್ಮಾನ್ ನಿಧಾನವಿದೆ ಎಂದು ತಹಸೀಲ್ದಾರರಿಗೆ ಹೇಳಿದ ಡಿಸಿ ನಕುಲ್ ಅವರು ತಾವು ಕೂಡ ಫಿಲ್ಡ್ಗೆ ಕೆಲಸ ಮಾಡಿ ಎಂದರು.ಪ್ರತಿ ಗ್ರಾಮವಾರು ಆಧಾರ್,ಬ್ಯಾಂಕ್ ಖಾತೆ ಜಿರಾಕ್ಸ್ ಪ್ರತಿಗಳನ್ನು ಒಂದೇಡೆ ಫೈಲ್ ಮಾಡಿಟ್ಟುಕೊಳ್ಳಿ ಮತ್ತು ವ್ಯಕ್ತಿಯ ಆರ್ಟಿಸಿ ಜಿರಾಕ್ಸ್ ಪ್ರತಿಯ ಫೈಲ್ನಲ್ಲಿ ಆಧಾರ್ ಮತ್ತು ಬ್ಯಾಂಕ್ನ ವಿವರವಿರುವ ಪುಟ ಸಂಖ್ಯೆ ನಮೂದಿಸಿಡಿ ಎಂದು ಹೇಳಿದ ಡಿಸಿ ನಕುಲ್ ಅವರು ಬರ ಮತ್ತು ಇನ್ನೀತರ ಫಲಾನುಭವಿ ಆಧಾರಿತ ಯಾವುದೇ ಕಾರ್ಯಕ್ರಮಗಳು ಬಂದರು ಕ್ಷೀಪ್ರಗತಿಯಲ್ಲಿ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಪಿ.ಎನ್.ಲೋಕೇಶ, ರಮೇಶ ಕೋನರೆಡ್ಡಿ ಸೇರಿದಂತೆ ವಿವಿಧ ತಾಲೂಕುಗಳ ತಹಸೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳು ಇದ್ದರು.