ಬಿಸಿಸಿಐ ವೈದ್ಯಕೀಯ ತಂಡದ ಮುಖ್ಯಸ್ಥ ನಿತಿನ್ ಪಟೇಲ್ ರಾಜೀನಾಮೆ

ಬೆಂಗಳೂರು: 

     ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡದ ಮುಖ್ಯಸ್ಥ ನಿತಿನ್ ಪಟೇಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಅವರು ಯಶಸ್ವಿಯಾಗಿ ಟೀಮ್‌ ಇಂಡಿಯಾ ಜತೆ ಸೇವೆ ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಉದ್ಘಾಟನೆಗೊಂಡ ಬಿಸಿಸಿಐಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಮುಂದಿನ ಕೆಲವು ದಿನಗಳಲ್ಲಿ ಹಲವು ಬದಲಾವಣೆಗಳು ಸಂಭವಿಸುವ ಸಾಧ್ಯತೆಗಳು ಕೂಡ ಇದೆ ಎನ್ನಲಾಗಿದೆ.

   ‘ಹೌದು, ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡದ ಮುಖ್ಯಸ್ಥ ನಿತೀನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿತಿನ್ ಬಿಸಿಸಿಐ ಜತೆ ಉತ್ತಮ ಸಂಬಂಧ ಹೊಂದಿದ್ದರು. ವಿಶೇಷವಾಗಿ ಅವರು ಎನ್‌ಸಿಎಯಲ್ಲಿ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ . 

    ನಿತಿನ್‌ ಅವರ ಕುಟುಂಬ ವಿದೇಶದಲ್ಲಿ ನೆಲೆಸಿದೆ. ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗವನ್ನು ಮುನ್ನಡೆಸುವುದು ವರ್ಷದ ಎಲ್ಲಾ 365 ದಿನಗಳ ಹೊಣೆಗಾರಿಕೆಯಾಗಿದೆ. ಹೀಗಾಗಿ ನಿತಿನ್‌ಗೆ ಕುಟುಂಬದ ಜತೆ ಕಾಲ ಇರಲು ಅಸಾಧ್ಯ. ಇದೇ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

    ನಿತಿನ್ ಪಟೇಲ್‌ರ ಅವಧಿಯಲ್ಲಿ ಚೇತರಿಸಿಕೊಂಡ ಪ್ರಮುಖ ಆಟಗಾರರೆಂದರೆ, ವೇಗಿ ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್. ನಿತೀನ್‌ ಸ್ಥಾನಕ್ಕೆ ನೂತನವಾಗಿ ಯಾರು ಆಯ್ಕೆ ಆಗಬಹುದು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

    ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಅಧಿಕಾರಾವಧಿ ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಬಿಸಿಸಿಐ 2027ರ ತನಕ ಲಕ್ಷ್ಮಣ್ ಅಧಿಕಾರಾವಧಿ ವಿಸ್ತರಿಸಲು ಮುಂದಾಗಿದೆ. ಆದರೆ ಲಕ್ಷ್ಮಣ್‌ಗೆ ಮತ್ತೊಮ್ಮೆ ಈ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಇದು ಅವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವುದು 2ನೇ ಬಾರಿ.