ಬಿಜೆಪಿಯಿಂದ ರಾಜ್ಯ ವಿಕಾಸದ ಸಂಕಲ್ಪ: ಅಮಿತ್ ಶಾ

ಬೆಂಗಳೂರು:

    ವಿಜಯ ಸಂಕಲ್ಪ ಯಾತ್ರೆಯು ಬಡವರ ಕಲ್ಯಾಣದ ಸಂಕಲ್ಪವನ್ನು ಹೊಂದಿದೆ. ಇದು ರಾಜ್ಯದ ವಿಕಾಸದ ಸಂಕಲ್ಪದ ಯಾತ್ರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ವಿಶ್ಲೇಷಿಸಿದರು.

    ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥ ಯಾತ್ರೆಯನ್ನು ಉದ್ಘಾಟಿಸಿದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಇಲ್ಲಿನ ಯಾತ್ರೆಯು ಕಲ್ಯಾಣ ಕರ್ನಾಟಕದ ವಿವಿಧ ಕಡೆ ಸಂಚರಿಸಲಿದೆ. ಈ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಬೇಕಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

    ರೈಲ್ವೆಯಲ್ಲಿ ಯುಪಿಎ ಸರಕಾರ ಕೊಟ್ಟದ್ದಕ್ಕಿಂತ 9 ಪಟ್ಟು ಹೆಚ್ಚು ಹಣ ಕೊಡಲಾಗಿದೆ ಎಂದು ತಿಳಿಸಿದರು. ಲಂಬಾಣಿ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದೇವೆ ಎಂದರು. ಕಾಂಗ್ರೆಸ್‌ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ನಾಯಕರಿದ್ದಾರೆ. ಇವರು ಕರ್ನಾಟಕಕ್ಕೆ ಒಳಿತನ್ನು ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಬಳಿ ಗೆಲುವಿನ ಸೂತ್ರ ಉಳಿದಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಕುಸಿಯುತ್ತಿದೆ. ಮೋದಿಜಿ ಅವರ ಸಾವಿಗಾಗಿ ಘೋಷಣೆ ಕೂಗುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಟೀಕೆಯಿಂದ ಕಮಲ ಇನ್ನಷ್ಟು ಪ್ರಬಲವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸದಿಂದ ನುಡಿದರು. ವಿಕಾಸದ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ.

    ಮೋದಿಜಿ ಸಾವನ್ನು ಬಯಸುವ ಕಾಂಗ್ರೆಸ್ಸಿಗರನ್ನು ಸೋಲಿಗೆ ಸಂಕಲ್ಪ ಕಲ್ಯಾಣ ಕರ್ನಾಟಕದ ಜನತೆಯದಾಗಲಿ ಎಂದು ಮನವಿ ಮಾಡಿದರು. ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ ಬಿಜೆಪಿ, ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಿದೆ. ಗರಿಷ್ಠ ಹಣವನ್ನೂ ಈ ಭಾಗಕ್ಕೆ ಕೊಟ್ಟಿದ್ದೇವೆ ಎಂದು ನೆನಪಿಸಿದರು. ಸಿದ್ದರಾಮಯ್ಯ ಸರಕಾರವು ಕಾಂಗ್ರೆಸ್ ಎಟಿಎಂ ಆಗಿತ್ತು ಎಂದು ಆರೋಪಿಸಿದರು.

    ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕುಟುಂಬವಾದವನ್ನು ಪೋಷಿಸುವ ಪಕ್ಷಗಳು. ಜೆಡಿಎಸ್‌ಗೆ ಕೊಡುವ ಮತ ಸಂಪೂರ್ಣ ಹಾಳಾಗುತ್ತದೆ. ಅದು ಕಾಂಗ್ರೆಸ್‌ಗೆ ಮತ ಕೊಟ್ಟಂತೆ ಎಂದ ಅವರು, ಟುಕ್ಡೇ ಟುಕ್ಡೇ ಗ್ಯಾಂಗ್ ಬೆಂಬಲಿಸುವ, ಆತಂಕವಾದಕ್ಕೆ ಬೆಂಬಲ ಕೊಡುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡದಿರಿ ಎಂದು ಮನವಿ ಮಾಡಿದರು.

    10 ಕೋಟಿ ಶೌಚಾಲಯ ನೀಡಿದ್ದು, 13 ಕೋಟಿ ಜನರಿಗೆ ಸಿಲಿಂಡರ್, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಕೊಡಲಾಗಿದೆ. 80 ಕೋಟಿ ಜನರಿಗೆ ಉಚಿತ ಪಡಿತರ, ಉಚಿತ ಕೋವಿಡ್ ಲಸಿಕೆ ಕೊಟ್ಟದ್ದನ್ನು ಪ್ರಸ್ತಾಪಿಸಿದರು. ಉಚಿತ ವಿಮೆ, ಆರೋಗ್ಯ ರಕ್ಷಣೆ ಕೊಟ್ಟದ್ದನ್ನು ವಿವರಿಸಿದ ಅವರು, ದೇಶದ ರಕ್ಷಣೆಗಾಗಿ 370ನೇ ವಿಧಿಯನ್ನು ರದ್ದು ಮಾಡಿದ್ದನ್ನು ಜನರ ಮುಂದಿಟ್ಟರು.

    ಕಾಂಗ್ರೆಸ್ ಮತಬ್ಯಾಂಕ್ ಪರವಾಗಿದೆ. ನಾವು ಮತಬ್ಯಾಂಕಿನ ಕಡೆ ಗಮನ ಕೊಡುತ್ತಿಲ್ಲ. ನಮಗೆ ದೇಶದ ಸುರಕ್ಷತೆ ಮುಖ್ಯ ಎಂದು ತಿಳಿಸಿದರು. ರಾಮಮಂದಿರ ಬೇಕಿತ್ತೇ ಅಥವಾ ಬೇಡವಾಗಿತ್ತೇ ಎಂದು ಪ್ರಶ್ನಿಸಿದ ಅವರು, ಮಂದಿರ ವಿಚಾರವನ್ನು ವಿಳಂಬ ಮಾಡಿದ್ದೇ ಕಾಂಗ್ರೆಸ್. ಆದರೆ, ಮೋದಿಜಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಕಾಶಿ, ಕೇದಾರನಾಥ, ಸೋಮನಾಥ ಮಂದಿರದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

     ರಸ್ತೆ, ವಿಮಾನನಿಲ್ದಾಣ, ನಳ್ಳಿ ನೀರಿನ ಸಂಪರ್ಕ, ಶಿಕ್ಷಣ ಕ್ಷೇತ್ರ, ನೀರಾವರಿಗೆ ಗರಿಷ್ಠ ಹಣ ನೀಡಿದ್ದನ್ನು ಅವರು ಜನರ ಗಮನಕ್ಕೆ ತಂದರು. ನಮ್ಮ ಕ್ಲಿನಿಕ್ ಸೇರಿ ಮನೆ ಮನೆಗೆ ನೀರಿನ ಸೌಕರ್ಯ ಕೊಡಲಾಗುತ್ತಿದೆ. ಕಿಸಾನ್ ಸಮ್ಮಾನ್ ಮೂಲಕ ಮೋದಿಜಿ- ಯಡಿಯೂರಪ್ಪ ಸರಕಾರ ಹಣ ನೀಡಿದ್ದನ್ನು ತಿಳಿಸಿದರು. ಬಿಜೆಪಿಗೆ ಮತ ಕೊಡಲು ಮನವಿ ಮಾಡಿದರು.

      ಜಗಜ್ಯೋತಿ ಬಸವೇಶ್ವರರು ಪ್ರಜಾಪ್ರಭುತ್ವದ ಸಂದೇಶ ನೀಡಿದರು. ಮೋದಿಜಿ ಗೌರವಪೂರ್ಣವಾಗಿ ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದ್ದರು ಎಂದು ವಿವರಿಸಿದರು. ಯಡಿಯೂರಪ್ಪ- ಬೊಮ್ಮಾಯಿ ಅವರು ಇಲ್ಲಿನ ಅಭಿವೃದ್ಧಿಗೆ ಗರಿಷ್ಠ ಅನುದಾನ ಕೊಟ್ಟಿದ್ದಾರೆ ಎಂದು ತಿಳಿಸಿದರು. ಗುರು ನಾನಕ್ ಅವರು ಕೂಡ ಇಲ್ಲಿ ಬಂದಿದ್ದರು. ಶ್ರೀ ನರಸಿಂಹ ಝರ್ಣಿ ದೇವಸ್ಥಾನಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷವು ಕರ್ನಾಟಕದ ನಾಯಕರಿಗೆ ಸದಾ ಅವಮಾನ ಮಾಡುತ್ತ ಬಂದಿದೆ. ಕರ್ನಾಟಕ, ಇಲ್ಲಿನ ನಾಯಕರಿಗೆ ಗೌರವ- ಸನ್ಮಾನ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನುಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಕಾರಣಕರ್ತರು ಪ್ರಧಾನಿ ಮೋದಿಜಿ. ಅಮಿತ್ ಶಾ ಅವರು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದರು.

   ದೇಶದ ಆರ್ಥಿಕ ಸ್ಥಿತಿಯನ್ನು ಸರಿ ದಾರಿಗೆ ತಂದು ದೇಶವನ್ನು ಮುನ್ನಡೆಸಿದವರು ಮೋದಿಜಿ ಎಂದು ಮೆಚ್ಚುಗೆ ಸೂಚಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಿದ್ದರೆ ದೇಶದಲ್ಲಿ ಅಲ್ಲೋಲಕಲ್ಲೋಲ ಆಗುತ್ತಿತ್ತು. ಸಾವಿರಾರು ಸಾವು ಆಗುತ್ತಿತ್ತು. ಆದರೆ, ಮೋದಿಜಿ ಅಧಿಕಾರದಲ್ಲಿ ಇದ್ದ ಕಾರಣ ಹಾಗಾಗಲಿಲ್ಲ ಎಂದು ವಿವರಿಸಿದರು.

     ದೇಶದ ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕಲು 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ, 2024ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರ ಪಡೆಯಬೇಕಿದೆ. ಬಿಜೆಪಿಗೆ ಮತ ಹಾಕಿ; ಮತ ಹಾಕಿಸಿ ಎಂದು ಮನವಿ ಮಾಡಿದರು.

    ಸಾಲದ ಹೊರೆ ಕೊಟ್ಟದ್ದು ಕಾಂಗ್ರೆಸ್. ಜನರಿಗೆ ಮೋಸ ಮಾಡುವುದು, ಸುಳ್ಳು, ಭ್ರಷ್ಟಾಚಾರ ಎಂದರೆ ಅದು ಕಾಂಗ್ರೆಸ್. ಜಾತಿ, ಮತಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದ ಹಿನ್ನಡೆಗೆ ಕಾಂಗ್ರೆಸ್ ಕಾರಣ. ನೈಜ ಸಾಮಾಜಿಕ ನ್ಯಾಯವನ್ನು ಬಿಜೆಪಿ ಮೀಸಲಾತಿ ಮೂಲಕ ಕೊಟ್ಟಿದೆ ಎಂದು ವಿವರ ನೀಡಿದರು. ಇದು ಕಾಂಗ್ರೆಸ್ ಹೊಟ್ಟೆಯಲ್ಲಿ ತಳಮಳಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ನೀಡಲಾಗುತ್ತಿದೆ ಎಂದರು. ನಮ್ಮದು ಜನಸಮಸ್ಯೆಗೆ ಸ್ಪಂದಿಸುವ- ನಿರ್ಣಾಯಕ ಸರಕಾರ ಎಂದು ನೆನಪಿಸಿದರು. ಮತ್ತೆ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸದಿಂದ ನುಡಿದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, 4 ರಥಗಳು 224 ಕ್ಷೇತ್ರಗಳಿಗೆ ಭೇಟಿ ಕೊಡಲಿವೆ. ಮಾರ್ಚ್ 25ರಂದು ದಾವಣಗೆರೆಯಲ್ಲಿ ಬೃಹತ್ ಸಭೆ ನಡೆಯಲಿದೆ. ಮಹಾನ್ ನಾಯಕ ನರೇಂದ್ರ ಮೋದಿಜಿ ಅವರು ಬರಲಿದ್ದಾರೆ ಎಂದು ವಿವರಿಸಿದರು.

    ಬಸವಕಲ್ಯಾಣ ಹೇಗಿತ್ತು? ಇವತ್ತು ಸಾವಿರಾರು ಕೋಟಿ ಹಣದಿಂದ ಹೇಗೆ ಅಭಿವೃದ್ಧಿ ಆಗಿದೆ ಎಂದು ಗಮನಿಸಿ. ಮೋದಿಜಿ, ಅಮಿತ್ ಶಾಜಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಅದಕ್ಕೆ ನಿಮ್ಮ ಬೆಂಬಲ ಇರಲಿ ಎಂದರಲ್ಲದೆ, ಕಾಂಗ್ರೆಸ್‌ನ ಹಣ, ತೋಳ ಬಲದ ಮೂಲಕ ಗೆಲ್ಲುವುದು ತಿರುಕನ ಕನಸಷ್ಟೇ ಎಂದು ಸವಾಲೆಸೆದರು. ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

    ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಬಸವಣ್ಣನ ಕರ್ಮಭೂಮಿಯಿಂದ ಈ ಯಾತ್ರೆ ಆರಂಭವಾಗಿದೆ. ಇದಕ್ಕೆ ಬಸವಣ್ಣನ ಪ್ರೇರಣೆ ಇದೆ. ಬಸವಕಲ್ಯಾಣವು ಜನರ ಆಕರ್ಷಣೆಯ ಕೇಂದ್ರ ಬಿಂದು. ಇಡೀ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ನರೇಂದ್ರ ಮೋದಿಜಿ ಅವರ ಸಾಧನೆಗಳನ್ನು ಜಗತ್ತೇ ಕೊಂಡಾಡುತ್ತಿದೆ ಎಂದು ತಿಳಿಸಿದರು.

   ಕೋವಿಡ್ ನಿಯಂತ್ರಣದ ಮಹತ್ವದ ಕಾರ್ಯವನ್ನು ನಮ್ಮ ಪ್ರಧಾನಿ ಮೋದಿಜಿ ಮಾಡಿದ್ದಾರೆ. 140 ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದ್ದಾರೆ ಎಂದ ಅವರು, ಶ್ರೀಲಂಕಾ- ಪಾಕಿಸ್ತಾನಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿವೆ. ಪಾಕ್ ಜನತೆ ಮೋದಿಜಿ ಅವರಂಥ ನಾಯಕತ್ವ ಬಯಸುತ್ತಿದ್ದಾರೆ ಎಂದು ವಿವರಿಸಿದರು. ದೇಶದ ಸಾಧನೆ, ದೇಶ, ರಾಜ್ಯಗಳ ಅಭಿವೃದ್ಧಿಯನ್ನು ಗಮನಿಸಿ ಮತ್ತೆ ಬಿಜೆಪಿ ಆಡಳಿತಕ್ಕೆ ಅವಕಾಶ ಕೊಡಬೇಕೆಂದು ವಿನಂತಿಸಿದರು.

    ಕಾಂಗ್ರೆಸ್ ದೇಶದಲ್ಲಿ ದೂಳೀಪಟವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಅಂತ್ಯಯಾತ್ರೆ ಈ ಚುನಾವಣೆ ಮೂಲಕ ನಡೆಯಲಿದೆ ಎಂದು ತಿಳಿಸಿದರು. 2023ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ತಿಳಿಸಿದರು.

    ರಾಜ್ಯದ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಮೀಸಲಾತಿ ಹೆಚ್ಚಳ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಬಿಜೆಪಿ ಮಾಡಿದೆ. ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ವಿಶ್ವವಂದ್ಯ ರಾಷ್ಟçವಾಗಲು ಸಹಕರಿಸಿ ಎಂದು ಮನವಿ ಮಾಡಿದರು.

   ರಾಜ್ಯದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವ ಪ್ರಭು ಚೌಹಾಣ್, ಸಂಸದ ಉಮೇಶ್ ಜಾಧವ್, ಶಾಸಕ ರಘುನಾಥ ಮಲ್ಕಾಪುರೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಶಾಸಕ ಶರಣು ಸಲಗರ್, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ರಾಜ್ಯ- ಜಿಲ್ಲೆ, ಸ್ಥಳೀಯ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link