ಕೊಪ್ಪಳ
ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ ಇರೋ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದೆ. ಇದರಿಂದ ನೀರು ಪೋಲಾಗುತ್ತಿದೆ. ಇದರ ನಡುವೆ ಇಂದು ಕೂಡ ಜಲಾಶಯದಿಂದ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕ್ರಸ್ಟ್ ಗೇಟ್ ರಿಪೇರಿ ಮಾಡಲು ಡ್ಯಾನಲ್ಲಿನ ನೀರನ್ನು ಹಂತಹಂತವಾಗಿ ಖಾಲಿ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ.
ಡ್ಯಾಂ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಡಂಗುರ ಸಾರಿ ಎಚ್ಚರಿಕೆ ನೀಡಿದೆ. ಹಾಗೂ ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಟಿಬಿ ಬೋರ್ಡ್ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ಸಮೀಪಕ್ಕೆ ಮಕ್ಕಳನ್ನು, ಜಾನುವಾರುಗಳು ಹೋಗದಂತೆ ಎಚ್ಚರವಹಿಸಿ. ಟಿಬಿ ಡ್ಯಾಮ್ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಯಾರೂ ಕೂಡ ನದಿ ಪಾತ್ರಕ್ಕೆ ಹೋಗದಂತೆ ಟಿಬಿ ಡ್ಯಾಮ್ ಕೆಳಭಾಗದ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕು, ಕಾರಟಗಿ ತಾಲೂಕಿನ ಗ್ರಾಮಗಳಲ್ಲಿ ಡಂಗುರ ಸಾರಿ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ನಿನ್ನೆಯಿಂದ ಈವರಗೆ 13 ಟಿಎಂಸಿ ನೀರು ಡ್ಯಾಂ ನಿಂದ ಖಾಲಿ ಮಾಡಲಾಗಿದೆ.
ಇನ್ನು ತುಂಗಭದ್ರಾ ಡ್ಯಾಂ ಸುತ್ತಮುತ್ತಲಿನ ಪ್ರದೇಶಕ್ಕೆ ಜನ ಸಂಚಾರ ನಿಷೇಧ ಮಾಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ವಿಜಯನಗರ ಜಿಲ್ಲಾಧಿಕಾರಿ ಎಂಎಸ್ ದಿವಾಕರ ಆದೇಶ ಹೊರಡಿಸಿದ್ದಾರೆ. ತುಂಗಭದ್ರಾ ಸೇತುವೆ ನೋಡಲು ಅಪಾರ ಪ್ರಮಾಣದ ಪ್ರವಾಸಿಗರು & ಜನ ಬರುತ್ತಾರೆ. ಸೇತುವೆ ಮೇಲೆ ನಿಂತು ಹುಚ್ಚಾಟ ಮೆರೆಯುತ್ತಾರೆ. ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡುವ ಹಿನ್ನಲೆ ಡ್ಯಾಂ ಸುತ್ತಮುತ್ತ ಜನ ಸಂಚಾರ ನಿಷೇಧ ಹೇರಲಾಗಿದೆ.
ಅಲ್ಲದೆ ನಾಳೆ ಸಿಎಂ ಸಿದ್ದರಾಮಯ್ಯನವರು ಸಚಿವ ಜಮೀರ್ ಅಹ್ಮದ್ ಜೊತೆ ಬಾಗಿನ ಅರ್ಪಿಸಬೇಕಿತ್ತು. ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೂ ಮುನ್ನವೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಮಹಾ ಅವಘಡ ಸಂಭವಿಸಿದೆ. ಹೀಗಾಗಿ ಬಾಗಿನ ಅರ್ಪಣೆ ಕಾರ್ಯಕ್ರಮ ರದ್ದು ಮಾಡಲಾಗಿದೆ. ಜಲಾಶಯದಿಂದ ಇದೀಗ 50-60 ಟಿಎಂಸಿ ನೀರು ರಿಲೀಸ್ ಮಾಡಲೇಬೇಕಿದೆ. ಇಲ್ಲದಿದ್ದರೆ ಗೇಟ್ ದುರಸ್ತಿ ಕಾರ್ಯ ಸಾಧ್ಯನೇ ಇಲ್ಲ. ಒಂದು ವೇಳೆ ಒಂದೇ ಗೇಟ್ ನಿಂದ ನೀರು ಹೊರಗೆ ಬಂದ್ರೆ ಇನ್ನುಳಿದ ಗೇಟ್ ಗಳಿಗೂ ಹಾನಿಯಾಗುತ್ತೆ. ಗೇಟ್ ಪ್ರೆಸರ್ ತಪ್ಪಿಸಲು 28 ಗೇಟ್ ಗಳ ಮೂಲಕ ನೀರು ರಿಲೀಸ್ ಮಾಡಲಾಗಿದೆ.
ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಹಲವಡೆ ಬಿರುಕುಗಳು ಉಂಟಾಗಿವೆ. ಕ್ರಸ್ಟ್ ಗೇಟ್ಗಳಿರೋ ಜಾಗದಲ್ಲಿ ಹಲವಡೆ ಸಣ್ಣ ಸಣ್ಣ ಬಿರುಕುಗಳಿವೆ. ಆದ್ರೂ ಅವುಗಳನ್ನು ದುರಸ್ತಿ ಮಾಡಲಾಗಿಲ್ಲ. ಬೇಸಿಗೆಯಲ್ಲಿ ಡ್ಯಾಂ ದುರಸ್ತಿ ಕೆಲಸ ಮಾಡಿದ್ದೇವೆ ಅಂತ ಡ್ಯಾಂ ಸಿಬ್ಬಂದಿ ಹೇಳ್ತಿದ್ದಾರೆ. ಹಾಗಾದರೆ ಬಿರುಕುಗಳು ಹೇಗೆ ಉಳಿದುಕೊಂಡವು? ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಗೇಟ್ ಕಿತ್ತುಹೋಗಿದೆ ಎಂದು ರೈತರು ಆರೋಪಿಸಿದ್ದಾರೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದು ವಿಪಕ್ಷಗಳೂ ಕಿಡಿಕಾರುತ್ತಿವೆ. ಟಿಬಿ ಜಲಾಶಯಕ್ಕೆ ಇಂದು ಮಧ್ಯಾಹ್ನ ಬಿ.ವೈ.ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ & ವಿಪಕ್ಷ ನಾಯಕ ಅಶೋಕ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ನಿನ್ನೆ ಡಿಸಿಎಂ ಡಿಕೆ. ಶಿವಕುಮಾರ್, ಬಳ್ಳಾರಿ ಸಂಸದ ತುಕಾರಾಂ, ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿ ಮಾಹಿತಿ ಪಡೆದಿದ್ರು. ರಾತ್ರೋ ರಾತ್ರಿ ವಿಜಯನಗರ ಕ್ಷೇತ್ರದ ಶಾಸಕ HR ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಎರಡು ಜಿಲ್ಲೆಗಳ ಅಧಿಕಾರಿಗಳು ಭೇಟಿ ನೀಡಿದ್ರು.