ಬೆಂಗಳೂರು :
ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ, ಪಾಕ್ ಮೂಲದ ಡಾರ್ಕ್‌ವೆಬ್ ದುಷ್ಕರ್ಮಿಗಳಿಂದ ಭಾರತದ ಬಳಕೆದಾರರ ಮೇಲೆ ಸೈಬರ್ ದಾಳಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಅಪರಿಚಿತ ಲಿಂಕ್, ಇ-ಮೇಲ್ ಗಳ ಮೇಲೆ ನಿಗಾವಹಿಸಿ, ಎಕ್ಸ್ ಕ್ಲೂಸಿವ್ ನ್ಯೂಸ್ ಲಿಂಕ್ ಗಳು ಹಾಗೂ ಎಪಿಕೆ ಫೈಲ್ಸ್, ಅಪರಿಚಿತ ಫಾರ್ವರ್ಡ್ ಲಿಂಕ್ ಕ್ಲಿಕ್ ಮಾಡದಂತೆ ಸೂಚನೆ ನೀಡಿದ್ದಾರೆ.
ನಾಗರಿಕರು ಜಾಗೃತರಾಗಿರುವಂತೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ವಾಟ್ಸ್ಯಾಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಕೊಳ್ಳಲು ಸೂಚನೆ ಸಹ ನೀಡಲಾಗಿದೆ. ಹೆಚ್ಚಾಗಿ ಸುದ್ದಿಗಳ ಲಿಂಕ್‌ಗಳು ವಾಟ್ಸ್ಯಪ್‌ನಲ್ಲಿ ಶೇರ್ ಆಗುತ್ತಿವೆ. ಇವುಗಳಲ್ಲಿ ಹೆಚ್ಚಿನ ಪಾಲು ಫೇಕ್ ಆಗಿದ್ದು, ಇವುಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಮೂಲಕ ಸೈಬರ್ ದಾಳಿ ನಡೆಸುವುದು ಸುಲಭವಾಗಿದೆ. ಇಂದು ಸೈಬರ್ ಕ್ರೈಮ್ ಪ್ರತಿ ಗ್ರಾಹಕನ ಮನೆ ಬಾಗಿಲನ್ನೂ ತಟ್ಟುತ್ತಿದೆ. ಎಲ್ಲರೂ ಈ ನಿಟ್ಟಿನಲ್ಲಿ ಎಚ್ಚರವಾಗಿರುವುದು ಅಗತ್ಯ ಎಂದು ತಿಳಿಸಲಾಗಿದೆ.
