ಬೆಂಗಳೂರು:
ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ನಗರದ ಹೊರ ವರ್ತುಲಕ್ಕೆ ಮೆಟ್ರೋ ಜಾಲ ವಿಸ್ತರಣೆ ಮಾಡಲು ಮೆಟ್ರೋ-3 ಮತ್ತು 4ನೇ ಹಂತದ ಯೋಜನೆಗಳನ್ನು ಕರ್ನಾಟಕ ಸರ್ಕಾರ ರೂಪಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ. ಕೆ. ಶಿವಕುಮಾರ್ ಈಗ ಬಿಎಂಆರ್ಸಿಎಲ್ಗೆ ಹೊಸ ಡಿಪಿಆರ್ ತಯಾರು ಮಾಡಲು ಸೂಚನೆ ನೀಡಿದ್ದಾರೆ.
ಈ ಕುರಿತು ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಬೆಂಗಳೂರು ಇವರಿಗೆ ಡಿ. ಕೆ. ಶಿವಕುಮಾರ್ ಟಿಪ್ಪಣಿಯನ್ನು ಕಳಿಸಿದ್ದಾರೆ. ಮಾರ್ಗ ವಿಸ್ತರಣೆ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳಿಸುವಂತೆ ಅವರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ಪತ್ರವೊಂದನ್ನು ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಡಿ. ಕೆ. ಶಿವಕುಮಾರ್ ಡಿಪಿಆರ್ ತಯಾರಿ ಮಾಡಲು ಸೂಚನೆ ಕೊಟ್ಟಿದ್ದಾರೆ. ಈ ಕುರಿತು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದಾರೆ. ಈ ಸೂಚನೆಯಿಂತೆ ಮಾಗಡಿ ರೋಡ್ ಸಂಪರ್ಕಿಸುವ ನಮ್ಮ ಮೆಟ್ರೋ ಯೋಜನೆ ಇನ್ನಷ್ಟು ವಿಸ್ತರಣೆಯಾಗಲಿದೆ.
ಸೋಮಶೇಖರ್ ಪೋಸ್ಟ್: ತಮ್ಮ ಪೋಸ್ಟ್ನಲ್ಲಿ ಶಾಸಕ ಎಸ್. ಟಿ. ಸೋಮಶೇಖರ್, ಬೆಂಗಳೂರು ಮೆಟ್ರೋ 4ನೇ ಹಂತದ ಯೋಜನೆಗೆ ಈ ಮೊದಲು ಮಾಗಡಿ ರಸ್ತೆಯ ಕಡಬಗೆರೆ ಗ್ರಾಮದವರೆಗೂ ಯೋಜನೆ ರೂಪಿಸಿದ್ದು ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ನಮ್ಮ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾವರೆಕೆರೆ ಗ್ರಾಮದವರೆಗೂ ಮೆಟ್ರೋ ಯೋಜನೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ವಿಸ್ತರಿಸುವಂತೆ ವಿನಂತಿಸಿಕೊಂಡಿದ್ದು, ನಮ್ಮ ಬೇಡಿಕೆಗೆ ಕೂಡಲೇ ಸ್ಪಂದಿಸಿ ಮೆಟ್ರೋ ಮಾರ್ಗ ವಿಸ್ತರಣೆಯ ಬಗ್ಗೆ ಡಿಪಿಆರ್ ಸಿದ್ದಪಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ ಎಂದು ಹೇಳಿದ್ದಾರೆ.
ನಮ್ಮ ಕ್ಷೇತ್ರ ವ್ಯಾಪ್ತಿಯ ಬಹಳಷ್ಟು ಗ್ರಾಮಗಳಿಗೆ ತಾವರೆಕೆರೆ ಮೆಟ್ರೋ ವಿಸ್ತರಣೆಯಿಂದ ಅನುಕೂಲವಾಗಲಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ತುಂಬುಹೃದಯದ ಧನ್ಯವಾದಗಳು ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ. ಡಿ. ಕೆ. ಶಿವಕುಮಾರ್ ಟಿಪ್ಪಣಿ: ಡಿ. ಕೆ. ಶಿವಕುಮಾರ್ ಬಿಎಂಆರ್ಸಿಎಲ್ ಎಂಡಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಬೆಂಗಳೂರು ಮೆಟ್ರೋಗೆ ಸಂಬಂಧಿಸಿದಂತೆ ಹೊಸಹಳ್ಳಿ, ಕಡಬಗೆರೆ, ಮಾಗಡಿ ರಸ್ತೆಗೆ ಹೊಂದಿಕೊಂಡಂತೆ ಸಿಗೇಹಳ್ಳಿ ಗೇಟ್ವರೆಗೆ ಚನ್ನೇನಹಳ್ಳಿ ಹಾಗೂ ತಾವರೆಕೆರೆ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣವನ್ನು ಬೆಳೆಸುತ್ತಿರುವುದರಿಂದ ಸದರಿ ಮಾರ್ಗಕ್ಕೆ ಹೊಸದಾಗಿ 4ನೇ ಹಂತದಲ್ಲಿ ಮೆಟ್ರೋ ರೈಲ್ವೆ ಮಾರ್ಗವನ್ನು ತಾವರೆಕೆರೆವರೆಗೆ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಶ್ರೀ ಎಸ್. ಟಿ. ಸೋಮಶೇಖರ್, ಮಾನ್ಯ ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ ಅವರು ಕೋರಿ ಮನವಿ ಸಲ್ಲಿಸಿರುತ್ತಾರೆ ಎಂದು ಹೇಳಿದ್ದಾರೆ.
ಮನವಿಯನ್ನು ಲಗತ್ತಿಸಲಾಗಿದೆ. ಆದುದರಿಂದ ಸದರಿಯವರ ಕೋರಿಕೆಯಂತೆ ಮೆಟ್ರೋ ಮಾರ್ಗ ವಿಸ್ತರಣೆ ಬಗ್ಗೆ ಡಿಪಿಆರ್ ಸಿದ್ಧಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಹೇಳಿದ್ದಾರೆ. ಬಜೆಟ್ನಲ್ಲಿ ಅನುದಾನ ನಿರೀಕ್ಷೆ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಶನಿವಾರ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ನಮ್ಮ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸಲು ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಘೋಷಣೆ ಮಾಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಬಜೆಟ್ನಲ್ಲಿ ಕೇಂದ್ರ ಸರ್ಕಾರದ ನೆರವು ಅತ್ಯಗತ್ಯವಾಗಿದೆ.
ಈಗಾಗಲೇ ನಮ್ಮ ಮೆಟ್ರೋ ಹಂತ-3 ಯೋಜನೆಯನ್ನು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಈ ಮೆಟ್ರೋ ಮಾರ್ಗ ಎರಡು ಕಾರಿಡಾರ್ಗಳನ್ನು ಒಳಗೊಂಡಿದೆ. 44.65 ಕಿ. ಮೀ. ಮಾರ್ಗ ಒಟ್ಟು 31ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗ ಜೆ. ಪಿ. ನಗರ 4ನೇ ಹಂತದಿಂದ ಕೆಂಪಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹೊರ ವರ್ತುಲ ರಸ್ತೆಯ ಪಶ್ಚಿಮ ಭಾಗದಲ್ಲಿ 32.15 ಕಿ. ಮೀ. ಉದ್ದದ ಮೊದಲ ಕಾರಿಡಾರ್ ಇರಲಿದ್ದು, ಇರದಲ್ಲಿ 22 ನಿಲ್ದಾಣಗಳಿವೆ. ಈ ಮಾರ್ಗ ವಿಮಾನ ನಿಲ್ದಾಣಕ್ಕೆ ಸಹ ಸಂಪರ್ಕವನ್ನು ಕಲ್ಪಿಸುತ್ತದೆ. ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿ-ಕಡಬಗೆರೆ ತನಕ 12.5 ಕಿ. ಮೀ.ಯ 2ನೇ ಕಾರಿಡಾರ್ ಇರಲಿದ್ದು, 9 ನಿಲ್ದಾಣಗಳನ್ನು ಒಳಗೊಂಡಿದೆ. ಯೋಜನೆಯ ಮಾಹಿತಿಯಂತೆ ಸದ್ಯ ಹೊಸಹಳ್ಳಿ, ಕೆಹೆಚ್ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಮತ್ತು ಕಡಬಗೆರೆ ನಿಲ್ದಾಣಗಳು ಇರಲಿವೆ.
